ಚಿತ್ರದುರ್ಗ, ಏಪ್ರಿಲ್. 18 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಪರ ಬಹಿರಂಗ ಪ್ರಚಾರಕ್ಕೆ ಇದೇ ತಿಂಗಳ 24 ರಂದು ಚಿತ್ರದುರ್ಗಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದು, ಬೃಹತ್ ರೋಡ್‍ಶೋ ನಡೆಸಲಾಗುವುದೆಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು 19, 20, 21 ರಂದು ಚಿತ್ರದುರ್ಗದ 35 ವಾರ್ಡ್‍ಗಳಲ್ಲಿಯೂ ಮನೆ ಮನೆಗೆ ಅಭಿಯಾನ ಹಮ್ಮಿಕೊಂಡಿದ್ದು, ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರವರ ಪರ ಮತಯಾಚಿಸಲಾಗುವುದು. 2167 ಬೂತ್‍ಗಳಿಗೂ ಅಭಿಯಾನ ಸಂಪರ್ಕಿಸಲಿದ್ದು, 21 ರಂದು ರಾತ್ರಿ ಎಂಟು ಗಂಟೆಯೊಳಗಾಗಿ ಶೇ. 96 ರಷ್ಟು ಮತದಾರರನ್ನು ತಲುಪುವ ಗುರಿಯಿಟ್ಟುಕೊಂಡಿದ್ದೇವೆಂದು ಹೇಳಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರ ಹಾಗೂ ನಗರದ 35 ವಾರ್ಡ್‍ಗಳಲ್ಲಿ ಅಭಿಯಾನ ಸಂಚರಿಸಲು ತಯಾರಿ ನಡೆಸುತ್ತಿದ್ದು, ಗೋವಿಂದ ಕಾರಜೋಳರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲಾಗುವುದು. ಈ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ನಲವತ್ತು ಸೀಟುಗಳನ್ನು ಗೆಲ್ಲುವುದು ಕಷ್ಟ. ದೇಶದೆಲ್ಲೆಡೆ ಮೋದಿ ಅಲೆ ಇರುವುದರಿಂದ ಈ ಚುನಾವಣೆಯಲ್ಲಿ ಗೆಲ್ಲುವ ಗೋವಿಂದ ಕಾರಜೋಳರವರು ಕೇಂದ್ರ ಮಂತ್ರಿಯಾಗುವುದು ಖಚಿತ. ಕಾಂಗ್ರೆಸ್‍ಗೆ ಪಾರ್ಲಿಮೆಂಟ್‍ನಲ್ಲಿ ವಿರೋಧ ಪಕ್ಷದ ಸ್ಥಾನಮಾನ ಸಿಗುವುದು ಕಷ್ಟ ಎಂದರು.
ಜೆಡಿಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರವರ ಪರ ಮತಯಾಚಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಶುಕ್ರವಾರ ಹಿರಿಯೂರು ಹಾಗೂ ಪರಶುರಾಂಪುರಕ್ಕೆ ಆಗಮಿಸಲಿದ್ದಾರೆ. ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಗೋವಿಂದ ಕಾರಜೋಳರವರ ಗೆಲುವು ಸುಲಭವಾಗಲಿದೆ ಎಂದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ನಗರಸಭೆ ಸದಸ್ಯರುಗಳಾದ ಶಶಿಧರ್, ಹರೀಶ್, ಭಾಸ್ಕರ್, ತಾರಕೇಶ್ವರಿ, ಮಂಜುಳ, ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ತಿಪ್ಪಮ್ಮ ವೆಂಕಟೇಶ್, ಅಭ್ಯರ್ಥಿ ಗೋವಿಂದ ಕಾರಜೋಳ ಪತ್ರಿಕಾಗೋಷ್ಠಿಯಲ್ಲಿದ್ದರು.
ತಿಪ್ಪಾರೆಡ್ಡಿ ವಿರುದ್ದ ಮುನಿಸಿಕೊಂಡಿದ್ದವರು ಬಿಜೆಪಿ. ಕಚೇರಿಯಲ್ಲಿ ಪ್ರತ್ಯಕ್ಷ : ಕಾಂಗ್ರೆಸ್‍ನ ಕೆ.ಸಿ.ವೀರೇಂದ್ರಪಪ್ಪಿ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದ ಕೆಲವು ನಗರಸಭೆ ಸದಸ್ಯರುಗಳು ಗುರುವಾರ ಬಿಜೆಪಿ. ಕಚೇರಿಯಲ್ಲಿ ಪ್ರತ್ಯಕ್ಷವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರವರಿಗೆ ಬೆಂಬಲ ಸೂಚಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಜಿ.ಹೆಚ್.ತಿಪ್ಪಾರೆಡ್ಡಿರವರನ್ನು ಶತಗತಾಯ ಸೋಲಿಸಬೇಕೆಂಬ ಹಠತೊಟ್ಟು ಕಾಂಗ್ರೆಸ್‍ನ ವೀರೇಂದ್ರಪಪ್ಪಿ ಕಡೆ ಹಾರಿದ್ದ ನಗರಸಭೆ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ, ಪತಿ ಸದಸ್ಯ ವೆಂಕಟೇಶ್, ಶಶಿಧರ್, ಭಾಸ್ಕರ್, ಮಂಜುಳ, ತಾರಕೇಶ್ವರಿ ಮಾಜಿ ಸದಸ್ಯ ಮಹೇಶ್ ಇವರುಗಳು ಬಿಜೆಪಿ. ಕಚೇರಿಗೆ ಆಗಮಿಸಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಗೋವಿಂದ ಕಾರಜೋಳರವರ ಪರ ನಿಲ್ಲುವುದಾಗಿ ಸಮ್ಮತಿಸಿದರು.