Breaking
Wed. Dec 25th, 2024

ದೇಶದ ಅಭಿವೃದ್ಧಿಯ ದೃಷ್ಟಿಕೋನದಿಂದ ಕಾಂಗ್ರೆಸ್ ಕೆಲಸ ಮಾಡಿದೆ.

ಚಿತ್ರದುರ್ಗ: ಏ.20 : ಕೇಂದ್ರ ಬಿಜೆಪಿ ಸರ್ಕಾರದ ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆ, ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಹೇಳಿದರು.

ಹಿರಿಯೂರು ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಶನಿವಾರ ಆದಿಜಾಂಬವ ಮಠಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮನೆಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಆರ್ಥಿಕ ಅವಕಾಶಗಳು ಲಭಿಸಬೇಕು ಎಂಬುದನ್ನು ಒತ್ತಿ ಹೇಳುತ್ತದೆ. ಆದರೀಗ ಅದು ಸಾಧ್ಯವಾಗುತ್ತಿಲ್ಲ. ಬಿಜೆಪಿ ಆಡಳಿತದ ಅವಧಿಯಲ್ಲಿ ಬರೀ ಭ್ರಷ್ಟಾಚಾರ, ಬಡತನ, ನಿರುದ್ಯೋಗ ಹೆಚ್ಚಳವಾಗಿದೆ ಎಂದರು.

ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಯಾವುದೇ ಗುರುತರವಾದ ಅಭಿವೃದ್ದಿ ಕೆಲಸ ಕಂಡಿಲ್ಲ. ಆದ್ದರಿಂದ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಭ್ರಷ್ಟಚಾರ ರಹಿತ ಆಡಳಿತ ನಡೆಸಲಿದೆ. ಈಗಾಗಲೇ ಪೆಟ್ರೊಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಹೆಚ್ಚಳ, ನಿರುದ್ಯೋಗ ಸಮಸ್ಯೆ ತಲೆದೂರಿದೆ. ಇದನ್ನು ಪರಿಹರಿಸಲು ಕಾಂಗ್ರೆಸ್ ದಿಟ್ಟ ಹೆಜ್ಜೆ ಇಡಲಿದೆ ಎಂದರು.

ಕಾಂಗ್ರೆಸ್ ಜಾತ್ಯತೀತ ತತ್ವಗಳಲ್ಲಿ ನಂಬಿಕೆಯಿಟ್ಟು ಪ್ರತಿಯೊಂದು ಜಾತಿ ಧರ್ಮಗಳನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿಯ ಚಿಂತನೆಯಿರುವ ಪಕ್ಷವಾಗಿದೆ. ಇದರಿಂದ ಜನರು ಕಾಂಗ್ರೆಸ್‍ನತ್ತ ಮುಖ ಮಾಡುತ್ತಿದ್ದಾರೆ. ದೇಶದ ಅಭಿವೃದ್ಧಿಯ ದೃಷ್ಟಿಕೋನದಿಂದ ಕಾಂಗ್ರೆಸ್ ಕೆಲಸ ಮಾಡಿದೆ. ಆದರೆ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಜನರ ಭಾವನೆಗಳೊಂದಿಗೆ ಆಟವಾಡಿ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತಿದ್ದು, ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಸುಳ್ಳುಗಳ ಮೂಲಕ ಜನರನ್ನು ವಂಚಿಸುತ್ತಿದೆ ಎಂದರು.

ಕಳೆದ 10 ವರ್ಷಗಳ ಹಿಂದೆ ಬಿಜೆಪಿಯೂ ಪ್ರತಿಯೊಬ್ಬ ನಾಗರೀಕನ ಬ್ಯಾಂಕ್ ಖಾತೆಗೆ ರು.15 ಲಕ್ಷ ಹಣ ಜಮೆ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ವಾರ್ಷಿಕ 2 ಕೋಟಿ ಉದ್ಯೋಗವೂ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದ್ದರು ಅದು ಸೃಷ್ಟಿಯಾಗಿಲ್ಲ. ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂಬ ಭರವಸೆಯೂ ಈಡೇರಿಲ್ಲ. ಚುನಾವಣೆಗಾಗಿ ಮಾತ್ರ ಇಂತಹ ಸುಳ್ಳು ಅಸ್ವಾಸನೆಗಳನ್ನು ಬಿಜೆಪಿ ನೀಡುತ್ತಿದೆ ಎಂದು ಟೀಕಿಸಿದರು.

ಜಿಪಂ ಮಾಜಿ ಸದಸ್ಯೆ ಗೀತಾನಾಗಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಕಾರ್ಯಕ್ರಮವನ್ನು ಜನಸಾಮಾನ್ಯರು ಅಭೂತಪೂರ್ವವಾಗಿ ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಶಕ್ತಿ, ಗೃಹಜ್ಯೋತಿ ಹಾಗೂ ಗೃಹ ಲಕ್ಷ್ಮೀ ಕಾರ್ಯಕ್ರಮಗಳು ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿವೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹೆಚ್ಚು ಮತಗಳ ಅಂತರದಲ್ಲಿ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಸಂತೋಷ್ ಕೋಡಿಹಳ್ಳಿ, ಪ್ರಗತಿಪರ ಚಿಂತಕ ಕೊಟ್ಟ ಶಂಕರ್, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮಾಜಿ ಪ್ರಧಾನರಾದ ಕೆ.ಪುರಶಪ್ಪ, ಮುಖಂಡರಾದ ಎ.ಸುರೇಶ್, ಮಹಾಲಿಂಗಪ್ಪ, ನಾಗಕುಮಾರ್, ಉಮೇಶ್, ಜಯಲಿಂಗಪ್ಪ, ಆರ್.ಪೂಜಪ್ಪ, ಎಂ.ಚಿದಾನಂದಸ್ವಾಮಿ, ಆರ್.ರಂಗಸ್ವಾಮಿ, ಪಿ.ಹನುಮಂತರಾಯ, ಲೋಕನಾಯ್ಕ್, ಗೋಪಿನಾಯ್ಕ್, ಶಕುಂತಲಮ್ಮ, ಶಿವಮ್ಮ ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *