ಹಿರಿಯೂರು, : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು 5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು ಪಿಕ್ ಪಾಕೆಟ್ ಸರ್ಕಾರ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ ನೆಹರೂ ಮೈದಾನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 25 ರಿಂದ 30 ರೂಪಾಯಿ ಇದ್ದ ಒಂದು ಬಾಟಲಿ ಬೆಲೆ 300 ರೂಗೆ ಏರಿಸಿದ್ದು, ಜನತೆಯಿಂದ ಸರ್ಕಾರ ವಸೂಲಿಗಿಳಿದಿದೆ.
ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಗ್ಯಾರಂಟಿ ಯೋಜನೆಗಳ ಬಗ್ಗೆ ನುಡಿದಂತೆ ನಡೆದಿದ್ದೇವೆ ಎಂದು ಪ್ರತಿದಿನ 8-10 ಕೋಟಿ ಜಾಹೀರಾತು ನೀಡುತ್ತಿದ್ದು, ಇಲ್ಲಿಯವರೆಗೆ 350 ಕೋಟಿ ಹಣವನ್ನು ಜಾಹೀರಾತಿಗೆ ಬಳಸಿಕೊಂಡಿದ್ದಾರೆ. ಈ ಜಾಹೀರಾತು ಹಣವನ್ನು ಜನತೆಯ ಉದ್ದಾರಕ್ಕೆ ಬಳಸಿಕೊಳ್ಳಬಹುದಿತ್ತು ಎಂದರು.
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದು ಸ್ವಾರ್ಥಕ್ಕಾಗಿ ಅಲ್ಲ. ಜನತೆಯ ಉದ್ದಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದೇವೆ. ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿ ಆದಾಗಲೂ ಸಹ ಜನಪರ ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಈ ವೇಳೆಗಾಗಲೇ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಬೇಕಿತ್ತು. ಆದರೆ 14 ವರ್ಷ ಕಳೆದರೂ ಕಾಮಗಾರಿ ಪೂರ್ಣವಾಗಿಲ್ಲ. ಕೇಂದ್ರ ಸರ್ಕಾರ 5500 ಕೋಟಿ ಹಣ ಬಿಡುಗಡೆಗೆ ನಿರ್ಧರಿಸಿದ್ದು ರಾಜ್ಯ ಸರ್ಕಾರ ಪ್ರಸ್ತಾವನೆ ಕಳಿಸದೇ ಸುಮ್ಮನೆ ಆರೋಪ ಮಾಡುತ್ತಿದೆ. ಪ್ರತಿನಿತ್ಯ ಕೇಂದ್ರದೊಂದಿಗೆ ಸಂಘರ್ಷ ಮಾಡಿಕೊಳ್ಳುತ್ತಾ ಹೋದರೆ ರೈತರನ್ನು ಉಳಿಸಲು ಆಗುತ್ತದಾ? ನಮ್ಮ ಪಕ್ಷಕ್ಕೆ ಸಂಪೂರ್ಣ ಅಧಿಕಾರ ಕೇಳಿದ್ದೆ. ನೀವು ಕೊಡಲಿಲ್ಲ. ಹಾಗಾಗಿ ಬಿಜೆಪಿ ಜೊತೆ ಸೇರಿ ಜನರ ಸೇವೆ ಮಾಡಲು ನಿರ್ಧರಿಸಿದ್ದೇನೆ.
ಹಿರಿಯೂರಿನಲ್ಲಿ ಹಿಂದೆ ಪೆನ್ ಪೇಪರ್ ಕೊಡಿ ಅಂತ ಕೇಳಿದ್ರು, ನೀವು ಅವರಿಗೆ ಸಂಪೂರ್ಣ ಪೆನ್ ಪೇಪರ್ ನ ಅಧಿಕಾರ ಕೊಟ್ಟುಬಿಟ್ರಿ, ಈಗ ಪೇಪರ್ ಪೆನ್ ಯಾವ ರೀತಿ ಬಳಕೆ ಆಗ್ತಿದೆ ನೋಡಿ ಎಂದರು. ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ತಮ್ಮನಿಗೆ ಮತ ನೀಡಿದ್ರೇ ನೀರು ಕೊಡ್ತೀನಿ ಅಂತಿದ್ದಾರೆ. ಇದೇನಾ ನಿಮ್ಮ ಪೆನ್ ಪೇಪರ್ ಬಳಸುವ ರೀತಿ ಎಂದು ಡಿಕೆಶಿ ವಿರುದ್ಧ ಗುಡುಗಿದರು.
ರಾಜ್ಯದಲ್ಲಿ ನೀರಾವರಿ ಯೋಜನೆಗಳ ಉದ್ದೇಶಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇನೆ. ಮಂಡ್ಯ ಜಿಲ್ಲೆಯ ಹಿರಿಯ ನಾಗರೀಕರಿಂದ ನನಗೆ ಒತ್ತಡವಿತ್ತು, ಜಿಲ್ಲೆಯ ಅಭಿವೃದ್ಧಿಗಾಗಿ ನಾನು ಸ್ಪರ್ಧಿಸುವಂತೆ ಅಲ್ಲಿನ ಜನರು ನನ್ನನ್ನು ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿ ನಿಲ್ಲಿಸಿದ್ದಾರೆ. ಜೀವ ಹೊದರೂ ಜೆಡಿಎಸ್ ಪಕ್ಷವನ್ನು ಮಾರಾಟ ಮಾಡುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ.
ಚುನಾವಣೆ ಮುಗಿದ ಎರಡ್ಮೂರು ತಿಂಗಳ ನಂತರ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುವುದು. ನನ್ನ ಮೇಲೆ ಸಂಪೂರ್ಣ ವಿಶ್ವಾಸವಿಡಿ ಇದು ನನ್ನ ಜವಾಬ್ದಾರಿ. ರಾಜ್ಯದ 28 ಕ್ಕೆ 28 ಕ್ಷೇತ್ರದಲ್ಲೂ ನಾವು ಗೆಲ್ಲುತ್ತೇವೆ. ಮುಂದಿನ ಐದು ವರ್ಷಗಳಲ್ಲಿ ನಾಡನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು. ಇಲ್ಲವಾದರೆ ರಾಜಕೀಯದಲ್ಲಿ ಮತ ಕೇಳಲು ಬರುವುದಿಲ್ಲ. ಬದುಕನ್ನು ಸರಿಸಡಿಸಿಕೊಳ್ಳಲು ಇದೊಂದು ಬಾರಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರಿಗೆ ಮತ ನೀಡಬೇಕು ಎಂದು ಕರೆ ನೀಡಿದರು.
ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪನವರ ದೈತ್ಯ ಶಕ್ತಿಯನ್ನು ನೋಡಿ ಕಾಂಗ್ರೆಸ್ ನಡುಗಿ ಹೋಗಿದೆ. 55 ಕೋಟಿ ಭರವಸೆಗಳನ್ನು ನೀಡಿರುವ ಕಾಂಗ್ರೆಸ್ ದು 47 ಲಕ್ಷ ಬಜೆಟ್ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿಯಾಗಿಲ್ಲ. ಕಾಂಗ್ರೆಸ್ ದಿವಾಳಿಯಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಹಣ ಖಾಲಿಯಾಗಿದೆ.
ಜೆಜೆ ಹಳ್ಳಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ಗ್ರಾಮದಿಂದ ಓಡಿಸಿದ್ದಾರೆ. ಬರದಿಂದ ಜನತೆ ಗುಳೆ ಹೋಗುತ್ತಿದ್ದಾರೆ. ಭoಡತನದಿಂದ ನುಡಿದಂತೆ ನಡೆದಿದ್ದೇವೆ ಎನ್ನುವುದನ್ನು ಬಿಟ್ಟರೆ ಅವರು ಬೇರೇನು ಹೇಳುವುದಿಲ್ಲ. 140 ಕೋಟಿ ಜನರ ರಕ್ಷಣೆಯನ್ನು ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ಮರಿಸಬೇಕು. ಮಾಡಿದ ಕಾರ್ಯಕ್ಕೆ ಪ್ರತಿಯಾಗಿ ಮತ ನೀಡಿ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಅವಕಾಶ ಮಾಡಿ ಕೊಡಿ ಎಂದರು.
ಈ ಸಂದರ್ಭದಲ್ಲಿ ಎಂಎಲ್ ಸಿ ತಿಪ್ಪೇಸ್ವಾಮಿ, ಮಾಜಿ ಶಾಸಕ ಜಿಹೆಚ್. ತಿಪ್ಪಾರೆಡ್ಡಿ , ಪಾವಗಡ ತಿಮ್ಮರಾಯಪ್ಪ, ಎಂ. ರವೀಂದ್ರಪ್ಪ, ಚಲುವಾದಿ ನಾರಾಯಣಸ್ವಾಮಿ, ಡಾ. ಸಿದ್ದಾರ್ಥ್ ತಿಪ್ಪಾರೆಡ್ಡಿ,ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಜಯಣ್ಣ, ಡಿ. ಯಶೋಧರ, ಬಿ.ಕಾಂತರಾಜು,ಜೆಜೆ ಹಳ್ಳಿ ಮಂಜಣ್ಣ, ಲಕ್ಷ್ಮೀಕಾಂತ್, ಗಿರಿಜಣ್ಣ, ಗುಣಶೇಖರ್, ಮೀನಾಕ್ಷಿ ನಂದೀಶ್,ಎನ್. ಹನುಮಂತರಾಯಪ್ಪ,ಜಲ್ದಪ್ಪ, ರಾಧಾ, ಬಸವರಾಜ್, ಶ್ರವಣಗೆರೆ ಹನುಮoತರಾಯ ಮುಂತಾದವರು ಉಪಸ್ಥಿತರಿದ್ದರು.