ಜಲವಾರ್ : ರಾಜಸ್ಥಾನದ ಜಲಾವರ್-ಅಕ್ಲೇರಾದ ಪಚೋಲಾ ಎಂಬಲ್ಲಿ ಕಳೆದ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬಂದ ಟ್ರಕ್ಕೊಂದು ಓಮಿನಿ ವ್ಯಾನ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಾನ್ನಲ್ಲಿದ್ದ 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಜನರು ತಮ್ಮ ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿ ವಾಪಸ್ ಆಗುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ.
ಅಕ್ಲೇರಾ ಪೊಲೀಸ್ ಠಾಣೆ ಪ್ರಭಾರಿ ಸಂದೀಪ್ ಬಿಷ್ಣೋಯ್ ಪ್ರತಿಕ್ರಿಯಿಸಿ, “ಅಕ್ಲೇರಾ ಸಮೀಪದ ಡುಂಗರ್ ಗ್ರಾಮದ ಬಗ್ರಿ ಸಮುದಾಯದ ಒಂಭತ್ತು ಜನರು ಶನಿವಾರ ತಮ್ಮ ಸಂಬಂಧಿಕರ ವಿವಾಹ ಸಮಾರಂಭಕ್ಕೆಂದು ಮಧ್ಯಪ್ರದೇಶಕ್ಕೆ ತೆರಳಿದ್ದರು. ಮದುವೆ ಮುಗಿಸಿ ವಾಪಸ್ ಆಗುವಾಗ ವೇಗವಾಗಿ ಬಂದ ಟ್ರಕ್ ಅವರ ವ್ಯಾನ್ಗೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಮೃತದೇಹಗಳನ್ನು ಅಕ್ಲೇರಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿಡಲಾಗಿದೆ. ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.