ಚಂಡೀಗಢ : ಮಕ್ಕಳಿಗೆ ಚಾಕ್ಲೇಟ್ ಕೊಡುವ ಮೊದಲು ಪೋಷಕರು ಹುಷಾರಾಗಿರಬೇಕು. ಯಾಕೆಂದರೆ ಅವಧಿ ಮುಗಿದ ಚಾಕ್ಲೇಟ್ ತಿಂದು ಪುಟ್ಟ ಕಂದಮ್ಮವೊಂದು ಆಸ್ಪತ್ರೆಗೆ ದಾಖಲಾದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಈ ಘಟನೆ ಪಂಜಾಬ್‌ನ ಪಟಿಯಾಲದಲ್ಲಿ ನಡೆದಿದೆ. ಲೂಧಿಯಾನ ಮೂಲದ ಬಾಲಕಿ ತನ್ನ ಪೋಷಕರೊಂದಿಗೆ ಪಟಿಯಾಲಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದಳು. ಈ ವೇಳೆ ಸಂಬಂಧಿ ವಿಕ್ಕಿ ಗೆಹ್ಲೋಟ್, ಸ್ಥಳೀಯ ಕಿರಾಣಿ ಅಂಗಡಿಯಿಂದ ಬಾಲಕಿಗೆ ಚಾಕ್ಲೇಟ್ ಬಾಕ್ಸ್ ಖರೀದಿಸಿದ್ದರು. ಬಳಿಕ ಅದನ್ನು ಬಾಲಕಿಗೆ ನೀಡಿದ್ದರು.
ಇತ್ತ ಮನೆಗೆ ಮರಳಿದ ಬಳಿಕ ಚಾಕ್ಲೇಟ್ ಸೇವಿಸಿದ ಬಾಲಕಿ ಬಾಯಿಂದ ರಕ್ತಸ್ರಾವವಾಗತೊಡಗಿದೆ. ಅಲ್ಲದೇ ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಯಿತು. ಬಾಲಕಿಯ ವೈದ್ಯಕೀಯ ಪರೀಕ್ಷೆಯಲ್ಲಿ ವಿಷಕಾರಿ ಪದಾರ್ಥ ಸೇವಿಸಿ ಅಸ್ವಸ್ಥಳಾಗಿರುವುದು ದೃಢಪಟ್ಟಿದೆ.
ನಂತರ ಬಾಲಕಿಯ ಮನೆಯವರು ಪೊಲೀಸ್ ಹಾಗೂ ರಾಜ್ಯ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ಆರೋಗ್ಯ ಅಧಿಕಾರಿಗಳ ತಂಡ ದೂರುದಾರರೊಂದಿಗೆ ಕಿರಾಣಿ ಅಂಗಡಿಗೆ ಧಾವಿಸಿ ಮಾದರಿಗಳನ್ನು ಸಂಗ್ರಹಿಸಿದರು. ಅಂಗಡಿಯಲ್ಲಿ ಅವಧಿ ಮೀರಿದ ತಿನಿಸುಗಳನ್ನು ಮಾರಾಟ ಮಾಡಿರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ. ಬಳಿಕ ಅಂಗಡಿಯಿಂದ ಅವಧಿ ಮೀರಿದ ಇತರೆ ತಿಂಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.