ತೆಲುಗಿನ ಖ್ಯಾತ ನಟ ಬಾಲಕೃಷ್ಣ ರಾಜಕೀಯರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. ಕರ್ನಾಟಕದ ಗಡಿಯ ಹಿಂದೂಪುರ ವಿಧಾನಸಭೆ ಕ್ಷೇತ್ರದಿಂದ ಬಾಲಯ್ಯ 3ನೇ ಬಾರಿ ಕಣಕ್ಕಿಳಿಸಿದ್ದಾರೆ. ಟಿಡಿಪಿ ಅಭ್ಯರ್ಥಿಯಾಗಿ ಈ ಬಾರಿಯೂ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಈಗಾಗಲೇ ಹಿಂದೂಪುರ ಕ್ಷೇತ್ರದ ಹಾಲಿ ಶಾಸಕರೂ ಆಗಿರುವ ಬಾಲಯ್ಯ, ನಾಮಪತ್ರ ಸಲ್ಲಿಸಿದಾಗ ತಮ್ಮ ಆಸ್ತಿಯನ್ನೂ ಘೋಷಣೆ ಮಾಡಿದ್ದು, ತಮಗಿಂತಲೂ ಪತ್ನಿಯ ಆಸ್ತಿಯೇ ಹೆಚ್ಚಾಗಿರುವುದು ಕಂಡು ಬಂದಿದೆ. 9 ಕೋಟಿ ರೂಪಾಯಿ ಸಾಲವನ್ನು ತೋರಿಸಿದ್ದರೆ, 81 ಕೋಟಿ ರೂಪಾಯಿ ಆಸ್ತಿಯನ್ನು ಬಾಲಯ್ಯ ಹೊಂದಿದ್ದಾರೆ.
ಬಾಲಯ್ಯ ಅವರ ಪತ್ನಿ ವಸುಂಧರಾ 140 ಕೋಟಿ ರೂಪಾಯಿಯ ಆಸ್ತಿ ಹೊಂದಿದ್ದು, ಬಾಲಯ್ಯ ಪುತ್ರ ಮೋಕ್ಷಜ್ಞ ಹೆಸರಿನಲ್ಲಿ 58 ಕೋಟಿ ರೂಪಾಯಿ ಆಸ್ತಿ ಇದೆ. ಒಟ್ಟಾರೆ ಬಾಲಯ್ಯ ಅವರ ಕುಟುಂಬದ ಆಸ್ತಿ 280.64 ಕೋಟಿ ರೂಪಾಯಿ ಘೋಷಣೆ ಆಗಿದೆ.
ಆಂಧ್ರಪ್ರದೇಶದಲ್ಲಿ ಮೇ 13ರಂದು ಸಾರ್ವತ್ರಿಕ ಚುನಾವಣೆ ಮತದಾನ ನಡೆಯಲಿದೆ. ಸದ್ಯ ತಮ್ಮ 109ನೇ ಚಿತ್ರದಲ್ಲಿ ನಟ ಬಾಲಯ್ಯ ಬಣ್ಣ ಹಚ್ಚಿದ್ದಾರೆ. ಚುನಾವಣೆ ಕಾರಣ ಕೆಲ ದಿನಗಳ ಕಾಲ ಚಿತ್ರೀಕರಣದಿಂದ ವಿರಾಮ ಪಡೆದಿದ್ದಾರೆ. ಚುನಾವಣೆ ಬಳಿಕ ಬಾಲಕೃಷ್ಣ ಮತ್ತೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಆಂಧ್ರ ವಿಧಾನಸಭೆ ಚುನಾವಣೆ ಈ ಬಾರಿ ನಿರೀಕ್ಷ ಮೂಡಿಸಿದೆ. ಹಾಲಿ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ವಿರುದ್ಧ ಟಿಡಿಪಿ, ಬಿಜೆಪಿ ಹಾಗೂ ಜನಸೇನಾ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತಿವೆ. ಶತಾಯ ಗತಾಯ ಜಗನ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಲು 3 ಪಕ್ಷಗಳು ಪ್ರಯತ್ನಿಸುತ್ತಿದೆ.
ಹಿಂದೂಪುರ ಟಿಡಿಪಿ ಭದ್ರಕೋಟೆ. ಹಾಗಾಗಿ ನಟ ಬಾಲಕೃಷ್ಣ ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಆಗುತ್ತಾರೆ ಎನ್ನುವ ನಿರೀಕ್ಷೆಯಿದೆ. 2014 ಹಾಗೂ 2019ರ ಆಂಧ್ರ ವಿಧಾನಸಭೆ ಚುನವಾಣೆಯಲ್ಲಿ ಸ್ಪರ್ಧಿಸಿ ಬಾಲಯ್ಯ 2 ಬಾರಿ ಗೆದ್ದಿದ್ದರು.