ಕೊಡಗು : ಬಾರ್ ಟೈಮ್ ಆಯಿತು, ಕ್ಲೋಸ್ ಮಾಡುತ್ತೇವೆ ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಬಿಯರ್ ಬಾಟಲ್ನಿಂದ ಕ್ಯಾಷಿಯರ್ನ ಕುತ್ತಿಗೆ, ಹೊಟ್ಟೆಗೆ ಚುಚ್ಚಿ ಬರ್ಬರವಾಗಿ ಕೊಲೆಮಾಡಿದ್ದಾನೆ. ಈ ಘಟನೆಯು ಜಿಲ್ಲೆಯ ಕುಶಾಲನಗರ ಕನ್ನಿಕಾ ಇಂಟರ್ನ್ಯಾಷನಲ್ ಬಾರ್ನಲ್ಲಿ ತಡರಾತ್ರಿ ನಡೆದಿದೆ.
ಸೋಮವಾರಪೇಟೆಯ ಬೆಟ್ಟದಳ್ಳಿ ನಿವಾಸಿ ಬಾರ್ ಕ್ಯಾಷಿಯರ್ ಸಂತೋಷ್ (40) ಕೊಲೆಯಾದವರು. ಕುಶಾಲನಗರದ ನಿವಾಸಿ ಹರ್ಷ ಕುಮಾರ್ ಕೃತ್ಯ ಎಸಗಿದ್ದು ಸದ್ಯ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಮದ್ಯಪಾನ ಮಾಡಲೆಂದು ಬಾರ್ಗೆ ಬಂದಿದ್ದಾನೆ. ಈ ವೇಳೆ ತಡರಾತ್ರಿ 12 ಗಂಟೆ ಆಗಿದ್ದರಿಂದ ಟೈಮ್ ಆಯ್ತು ಇನ್ನು ಮುಚ್ಚುತ್ತೇವೆ ಎಂದು ಹೇಳಿ ಬಾರ್ ಮುಚ್ಚಲು ಕ್ಯಾಷಿಯರ್ ಮುಂದಾಗಿದ್ದಾರೆ. ಇಷ್ಟಕ್ಕೆ ಜಗಳ ತೆಗೆದು ಬಿಯರ್ ಬಾಟಲ್ ಅನ್ನು ಒಡೆದು ಕ್ಯಾಷಿಯರ್ ಕುತ್ತಿಗೆಗೆ ಹಾಗೂ ಹೊಟ್ಟೆಗೆ ಭೀಕರವಾಗಿ ಹಂತಕ ಚುಚ್ಚಿದ್ದಾನೆ. ಪರಿಣಾಮ ಕ್ಯಾಷಿಯರ್ ಸಾವನ್ನಪ್ಪಿದ್ದಾನೆ.
ಕುಶಾಲನಗರದ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಆರೋಪಿಯನ್ನ ಕುಶಾಲನಗರ ಟೌನ್ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಕೊಲೆ ಮಾಡುವಾಗ ಆರೋಪಿ ಮದ್ಯಪಾನ ಮಾಡಿರುವುದು ಗೊತ್ತಾಗಿದೆ.