ಬೆಳಗಾವಿ : ವಿವಾಹಿತ ಮಹಿಳೆಯೊಬ್ಬಳ ಖಾಸಗಿ ಫೋಟೋ ಇಟ್ಟುಕೊಂಡು ಮತಾಂತರಕ್ಕೆ ಪೀಡಿಸಿ, ಲವ್ ಜಿಹಾದ್ ಜಾಲಕ್ಕೆ ತಳ್ಳಲು ಯತ್ನಿಸಲಾಗಿದೆ ಎಂಬ ಆರೋಪ ಸವದತ್ತಿಯ ಮುನವಳ್ಳಿಯಲ್ಲಿ ಕೇಳಿ ಬಂದಿದೆ.
ಮುನವಳ್ಳಿ ನಗರದಲ್ಲಿ ಸಂತ್ರಸ್ತ ಮಹಿಳೆಯ ಪತಿ ಕಿರಾಣಿ ಅಂಗಡಿ ಹೊಂದಿದ್ದರು. ಪತಿ ಇಲ್ಲದೇ ಇರುವಾಗ ಆರೀಫ್ ಬೇಪಾರಿ ಎಂಬಾತ ಅಂಡಿಗೆ ಬಂದು ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಮೊಬೈಲ್ ನಂಬರ್ ಪಡೆದು ಇಲ್ಲ ಸಲ್ಲದ ಆಮೀಷ ಒಡ್ಡಿ ಮಹಿಳೆಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ, ಬೆಳಗಾವಿಗೆ ಕರೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೀಫ್‍ಗೆ ಐವರು ಸಾಥ್ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಇಷ್ಟೇ ಅಲ್ಲದೇ ಲೈಂಗಿಕ ದೌರ್ಜನ್ಯ ಎಸಗುವ ಫೋಟೋಗಳನ್ನು ತೆಗೆದುಕೊಂಡು ದುಷ್ಕರ್ಮಿಗಳು ಮತಾಂತರಕ್ಕೆ ಪೀಡಿಸಿದ್ದಾರೆ. ಮತಾಂತರಗೊಳ್ಳದೇ ಇದ್ದರೆ ಖಾಸಗಿ ಫೋಟೋಗಳನ್ನು ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ. ಹಣೆಗೆ ಕುಂಕುಮ ಹಚ್ಚುವುದನ್ನು ನಿಲ್ಲಿಸಬೇಕು, ಹಿಂದೂ ಸಂಪ್ರದಾಯ ಬಿಡಬೇಕು. ನಿತ್ಯ ಬುರ್ಖಾ ಧರಿಸಬೇಕು. ಐದು ಸಲ ನಮಾಜ್ ಮಾಡಬೇಕು ಎಂದು ಪೀಡಿಸಿದ್ದಾರೆ. ಅಲ್ಲದೇ ಒತ್ತಾಯಪೂರ್ವಕವಾಗಿ ಮಹಿಳೆಗೆ ಬುರ್ಖಾ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ದುಷ್ಕರ್ಮಿಗಳ ವಿರುದ್ಧ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮತಾಂತರಕ್ಕೆ ಯತ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಈ ಸಂಬಂಧ ಬೆಳಗಾವಿ ಜಿಲ್ಲೆಯ ಸವದತ್ತಿ ಪೊಲೀಸ್ ಠಾಣೆಯಲ್ಲಿ, ಆರೀಫ್ ಬೇಪಾರಿ, ಆದೀಲ್, ಶೋಯಲ್, ಮುಕ್ತಮ್, ಉಮರ್, ಕರೆವ್ವ ಕಟ್ಟಿಮನಿ ಹಾಗೂ ಕೌಸರ್ ಎಂಬವರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಇದೀಗ ಮತಾಂತರಕ್ಕೆ ಯತ್ನಿಸಿದ ರಫೀಕ್ ಬೇಫಾರಿ ಆತನ ಪತ್ನಿ ಕೌಸರ್ ಬೇಫಾರಿ ಬಂಧಿಸಲಾಗಿದೆ ಎಂದು ಎಸ್ಪಿ ಡಾ.ಭೀಮಾ ಶಂಕರ್ ಗುಳೇದ ಮಾಹಿತಿ ನೀಡಿದ್ದಾರೆ.