ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಸುಳ್ಳು ಹೇಳುವ ಸ್ಪರ್ಧೆಗೆ ಇಳಿದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇಂದು ಬೆಂಗಳೂರು ಹೊರ ವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಿಕೆ ಸುರೇಶ್ ಪರ ಸಿಎಂ ಸಿದ್ದರಾಮಯ್ಯ ಮತ ಪ್ರಚಾರ ನಡೆಸಿದರು.
ಹೆಬ್ಬಗೋಡಿ ಮುತ್ಯಾಲಮ್ಮ ದೇವಾಲಯದ ಬಳಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಮಹಮೋಹನ್ ಸಿಂಗ್ ಖಾಲಿ ಚೊಂಬು ಕೊಟ್ಟಿದ್ದರು. ನರೇಂದ್ರ ಮೋದಿ ಅದನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ ಎಂದು ದೇವೇಗೌಡರು ಬೆಂಗಳೂರಿನಲ್ಲಿ ನಿನ್ನೆ ಹೇಳಿದ್ದಾರೆ. ಆದರೆ 10 ವರ್ಷದಲ್ಲಿ ಮೋದಿ 120 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಕೋಮುವಾದಿ ಪಕ್ಷ ಎಂದ ದೇವೇಗೌಡರು ಈಗ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಮುಂದಿನ ಜನ್ಮ ಇದ್ದರೆ ಮುಸಲ್ಮಾನ ಆಗಿ ಹುಟ್ಟುತ್ತೇನೆ ಎಂದಿದ್ದರು. ಆದರೆ ಅಳಿಯನಿಗೆ ಅವರ ಪಕ್ಷದಲ್ಲಿ ಟಿಕೆಟ್ ನೀಡಲಿಲ್ಲ. ಬಿಜೆಪಿಯಲ್ಲಿ ತೆಗೆದುಕೊಂಡು ಹೋಗಿ ನಿಲ್ಲಿಸಿದ್ದಾರೆ. ಸ್ವಾರ್ಥಕ್ಕಾಗಿ ಬಿಜೆಪಿ ಜೊತೆ ಸೇರಿದ್ದಾರೆ ಎಂದು ಕಿಡಿಕಾರಿದರು.
ಎರಡು ಬಾರಿ ಪ್ರಧಾನಿಯಾಗಿರುವ ಮೋದಿ ಕೊಡುಗೆ ಏನು? ಅನೇಕ ಭರವಸೆ ಕೊಟ್ಟಿದ್ದು ಅದ್ಯಾವುದೂ ಈಡೇರಿಸಿಲ್ಲ. ವಿದೇಶದಲ್ಲಿ ಕಾಂಗ್ರೆಸ್ ಹಾಗೂ ಬೇರೆಯವರು ಹಣ ಇಟ್ಟಿದ್ದಾರೆ. ಅದೆಲ್ಲ ತಂದು ಮೂರೇ ದಿನದಲ್ಲಿ ತಂದು ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದಿದ್ದರು. 15 ಪೈಸೆಯೂ ಯಾರ ಖಾತೆಗೂ ಬಂದಿಲ್ಲ. ಇದು ಮೊದಲನೇ ಸುಳ್ಳು. ನೀಡಿದ ಭರವಸೆಯಂತೆ ಉದ್ಯೋಗ ಯಾರಿಗೂ ಕೊಟ್ಟಿಲ್ಲ. ಉದ್ಯೋಗ ಕೊಡಿ ಎಂದು ಕೇಳಿದರೆ ಪಕೋಡ ಮಾರಲು ಹೇಳಿದರು. ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದರು ಕೊಟ್ಟಿಲ್ಲ. ಅಂದ ಮೇಲೆ ಓಟು ಕೊಡಬೇಕಾ ಎಂದು ಪ್ರಶ್ನಿಸಿದರು.