ಚಿತ್ರದುರ್ಗ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿರುವ ಕಾಡುಗೊಲ್ಲರೆಲ್ಲಾ ಬಿಜೆಪಿಗೆ ಬೆಂಬಲಿಸುವ ತೀರ್ಮಾನ ಕೈಗೊಂಡಿದ್ದೇವೆಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಗೌರವಾಧ್ಯಕ್ಷ ಸಿ.ಮಹಲಿಂಗಪ್ಪ ಹೇಳಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅನೇಕ ವರ್ಷಗಳಿಂದಲೂ ಕಾಡುಗೊಲ್ಲರು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಜಾತಿ ಪಟ್ಟಿಯಲ್ಲಿ ಸೇರಿಸಲು ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಕಾಲ ತೆಗೆದುಕೊಂಡಿತು. ತದ ನಂತರ ಜಾತಿ ಸರ್ಟಿಫಿಕೇಟ್ ನೀಡಲು ವಿಳಂಭ ಮಾಡಿದ್ದರಿಂದ ನಮ್ಮ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಕೇಂದ್ರದಲ್ಲಿ ಬಿಜೆಪಿ. ನಾಲ್ಕು ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿರುವುದರಿಂದ ಈ ಚುನಾವಣೆಯಲ್ಲಿ ಕಾಡುಗೊಲ್ಲರು ಬೆಂಬಲಿಸಲಿದ್ದೇವೆಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ. ಸರ್ಕಾರವಿದ್ದಾಗ ನಮ್ಮ ಬೇಡಿಕೆಗಳನ್ನು ಈಡೇರಿಸಬಹುದಿತ್ತು. ಪ್ರಯತ್ನ ಪಟ್ಟಿತು. ಆದರೆ ಕೆಲಸವಾಗಲಿಲ್ಲ. 2013-24 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಎ.ವಿ.ಉಮಾಪತಿ ಹಾಗೂ ಕೃಷ್ಣಪ್ಪನವರಿಗೆ ಟಿಕೆಟ್ ನೀಡದೆ ವಂಚಿಸಿತು. 2018 ರಲ್ಲಿ ತುಮಕೂರು ಗ್ರಾಮಾಂತರದಿಂದ ಕಾಡುಗೊಲ್ಲರಿಗೆ ಟಿಕೆಟ್ ನೀಡಿ ಕಣ್ಣೊರೆಸುವ ತಂತ್ರ ಮಾಡಿತು. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಕ್ಕೊರಲಿನಿಂದ ಬಿಜೆಪಿ.ಗೆ ಬೆಂಬಲಿಸುವ ನಿರ್ಧಾರ ತೆಗೆದುಕೊಂಡಿದ್ದೇವೆಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಟಿ.ಅಜ್ಜಪ್ಪ ಮಾತನಾಡಿ 2018 ರ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣಿಮ ಶ್ರೀನಿವಾಸ್‍ರವರನ್ನು ನಮ್ಮವರೆಂದು ಹಿರಿಯೂರು ಕ್ಷೇತ್ರದಿಂದ ಗೆಲ್ಲಿಸಿಕೊಂಡೆವು. ಆದರೆ ಅವರೆ ನಮಗೆ ಅಡ್ಡಗಾಲಾಗಿದ್ದರಿಂದ ನಮಗೆ ತೊಂದರೆಯಾಯಿತು. ಈಗ ಎಲ್ಲರೂ ಒಂದಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ. ಗೆ ಮತ ನೀಡಲು ತೀರ್ಮಾನಿಸಿದ್ದೇವೆ. ಅದಕ್ಕಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಬಹುಮತದಿಂದ ಗೆಲ್ಲಿಸಿಕೊಂಡು ಪಾರ್ಲಿಮೆಂಟ್‍ಗೆ ಕಳಿಸುವುದಾಗಿ ಹೇಳಿದರು.
ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆನಂದ, ವೆಂಕಟೇಶ್ ಯಾದವ್, ಹೊನ್ನೂರು ಗೋವಿಂದಪ್ಪ, ಟಿ.ರಂಗಸ್ವಾಮಿ, ನ್ಯಾಯವಾದಿ ಕೃಷ್ಣಮೂರ್ತಿ, ಉಮೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.