ಚಿತ್ರದುರ್ಗ ಏ. 23 : ನಗರದ ನೀಲಕಂಠೇಶ್ವರ ದೇವಾಲಯದ ಆವರಣದಲ್ಲಿನ ವೀರಶೈವ ಸಮಾಜದವತಿಯಿಂದ ಇಂದು ಹರಪನಹಳ್ಳಿಯ ಪಟ್ಟಣದ ಮೇಗಳಪೇಟೆ ಶ್ರೀ ಗುಗ್ಗಳ ವೀರಭದ್ರೇಶ್ವರ ದೇವಸ್ಥಾನ ಸಮಿತಿವತಿಯಿಂದ ಜನಪದ ಕಲಾ ತಂಡದೊಂದಿಗೆ ಶ್ರೀ ವೀರಭದ್ರ ದೇವರ ಗುಗ್ಗುಳ ಮತ್ತು ಅಗ್ನಿಕುಂಡ ಕಾರ್ಯಕ್ರಮ ನಡೆಸಲಾಯಿತು.
ಇಂದು ಬೆಳಿಗ್ಗೆ 7 ಗಂಟೆಗೆ ನಗರದ ರಂಗಯ್ಯನ ಬಾಗಿಲ ಬಳಿಯ ಉಜ್ಜಯನಿ ಮಠದ ಆವರಣದಲ್ಲಿ ಗಂಗಾಪೂಜೆಯ ನಂತರ ಜನಪದ ಕಲಾ ತಂಡದೊಂದಿಗೆ ಗುಗ್ಗುಳ ಪ್ರಾರಂಭವಾಗಿದ್ದು, ರಂಗಯ್ಯನ ಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು, ಮಹಾತ್ಮಗಾಂಧಿ ವೃತ್ತ ಮುಖಾಂತರವಾಗಿ ಗುಗ್ಗಳ ಹಾದು ಹೋಯಿತು. ಈ ಸಂದರ್ಭದಲ್ಲಿ ಭಕ್ತಾಧಿಗಳು ಸಾಲಾಗಿ ನೆಲದ ಮೇಲೆ ಕುಳಿತುಕೊಂಡು ಅವರ ತಲೆಯ ಮೇಲೆ ವೀರಭದ್ರಸ್ವಾಮಿಯ ಅಗ್ನಿಕುಂಡವನ್ನು ಇಡುವುದರ ಮೂಲಕ ಸ್ವಾಮಿಯ ಆರ್ಶಿವಾದವನ್ನು ಪಡೆದರು.
ದಾರಿಯುದ್ದಕ್ಕೂ ಹರಪನಹಳ್ಳಿಯ ಪಟ್ಟಣದ ಮೇಗಳಪೇಟೆ ಶ್ರೀ ಗುಗ್ಗಳ ವೀರಭದ್ರೇಶ್ವರ ದೇವಸ್ಥಾನ ಸಮಿತಿವತಿಯಿಂದ ಜನಪದ ಕಲಾ ತಂಡದವರು ವೀರಭದ್ರನ ವೇಷವನ್ನು ಧರಿಸುವುದರ ಮೂಲಕ ವೀರಭದ್ರ ಸ್ವಾಮಿಯ ಆವತಾರಗಳನ್ನು ಒಡುಪುಗಳನ್ನು ಹೇಳುವುದರ ಮೂಲಕ ಭಕ್ತಾಧಿಗಳಿಗೆ ವೀರಭದ್ರಸ್ವಾಮಿಯ ಆವತಾರಗಳನ್ನು ತಿಳಿಸಿದರು. ಇವರೊಂದಿಗೆ ವೀರಗಾಸೆಯ ತಂಡದವರು ಹಿಮ್ಮೇಳವನ್ನು ನುಡಿಸುವುದರ ಮೂಲಕ ಅವರಿಗೆ ಸಾಥ್ ನೀಡಿದರು.
ದಾರಿಯುದ್ದಕ್ಕೂ ವೀರಭದ್ರಸ್ವಾಮಿಯ ಭಕ್ತಾಧಿಗಳು ಮನೆಯ ಮುಂದೆ ನೀರನ್ನು ಹಾಗೂ ರಂಗೋಲೆಯನ್ನು ಹಾಕುವುದರ ಮೂಲಕ ಸ್ವಾಮಿಯ ಗುಗ್ಗುಳವನ್ನು ಬರ ಮಾಡಿಕೊಂಡರು. ಇದ್ದಲ್ಲದೆ ಹಲವಾರು ಭಕ್ತಾಧಿಗಳು ತಮ್ಮ ಶಕ್ತಾನುಸಾರ ಗುಗ್ಗಳದಲ್ಲಿ ಭಾಗವಹಿಸಿದ್ದವರಿಗೆ ಮಜ್ಜಿಗೆ, ಪಾನಕವನ್ನು ನೀಡಿದರು. ಇದರೊಂದಿಗೆ ಭಕ್ತಾಧಿಗಳು ತಮ್ಮ ಮನೆಯ ಮುಂದೆ ವೀರಭದ್ರಸ್ವಾಮಿಯ ಗುಗ್ಗಳ ಬಂದಾಗ ಹಣ್ಣು, ಕಾಯಿ ಹೂ.ಗಳನ್ನು ನೀಡುವುದರ ಮೂಲಕ ಸ್ವಾಮಿಗೆ ಭಕ್ತಿಯನ್ನು ಸರ್ಮಪಿಸಿದರು.
ಮೆರವಣಿಗೆಯ ನಂತರ ನಗರದ ಶ್ರೀ ನೀಲಕಂಠೇಶ್ವರ ದೇವಾಲಯದ ಮುಂಭಾಗದಲ್ಲಿ ನಿರ್ಮಾಣ ಮಾಡಿರುವ ಅಗ್ನಿಕುಂಡಕ್ಕೆ ಪೂಜೆಯನ್ನು ಸಲ್ಲಿಸಿ ತದ ನಂತರ ಅದನ್ನು ಹಾಯುವುದರ ಮೂಲಕ ವೀರಭದ್ರಸ್ವಾಮಿಯ ಗುಗ್ಗಳ ಮತ್ತು ಅಗ್ನಿಕುಂಡ ಕಾರ್ಯಕ್ರಮಕ್ಕೆ ಸಮಾಪ್ತಿ ಹಾಡಲಾಯಿತು. ತದ ನಂತರ ಮಹಾ ಮಂಗಳಾರತಿ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಈ ಗುಗ್ಗುಳ ಕಾರ್ಯಕ್ರಮದಲ್ಲಿ ಶ್ರೀ ವೀರಭದ್ರಸ್ವಾಮಿ ಮನೆ ದೇವರ ಮನೆತನದವರು ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು.