ಪ್ರಚಾರದ ಬಗ್ಗೆ ‘ಪುಷ್ಪ 2’ ಸಿನಿಮಾ ತಂಡದವರು ಸಿಕ್ಕಾಪಟ್ಟೆ ಕಾಳಜಿ ವಹಿಸುತ್ತಿದ್ದಾರೆ. ಈ ಚಿತ್ರತಂಡದಿಂದ ಹೊಸ ಹೊಸ ಅಪ್ಡೇಟ್ಗಳು ಒಂದರ ಹಿಂದೆ ಒಂದು ಬರುತ್ತಿವೆ. ಇತ್ತೀಚೆಗೆ ಅಲ್ಲು ಅರ್ಜುನ್ ಅವರ ಬರ್ತ್ಡೇ ಪ್ರಯುಕ್ತ ಗಂಗಮ್ಮ ಜಾತ್ರೆ ಸನ್ನಿವೇಶದ ಟೀಸರ್ ಬಿಡುಗಡೆ ಆಗಿತ್ತು. ಅದರಲ್ಲಿ ಅಲ್ಲು ಅರ್ಜುನ್ ಅವರು ಗ್ರ್ಯಾಂಡ್ ಎಂಟ್ರಿ ನೀಡಿದ್ದರು. ಆ ಟೀಸರ್ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಇನ್ನೂ ಚರ್ಚೆ ನಡೆಯುತ್ತಿರುವಾಗಲೇ ಹೊಸ ನ್ಯೂಸ್ ನೀಡಲಾಗಿದೆ. ‘ಪುಷ್ಪ 2’ ಸಿನಿಮಾದ ಮೊದಲ ಸಾಂಗ್ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಏಪ್ರಿಲ್ 24ರಂದು ಸಂಜೆ 4.05ಕ್ಕೆ ಈ ಚಿತ್ರದ ಮೊದಲ ಹಾಡಿನ ಪ್ರೋಮೋ ಬಿಡುಗಡೆ ಆಗಲಿದೆ.
ಪುಷ್ಪ 2’ ಸಿನಿಮಾ ಮೇಲೆ ಇರುವ ನಿರೀಕ್ಷೆ ಸಣ್ಣದೇನಲ್ಲ. ಈ ಚಿತ್ರದ ಹಾಡುಗಳು ಬರೋಬ್ಬರಿ 60 ಕೋಟಿ ರೂಪಾಯಿಗೆ ಮಾರಾಟ ಆಗಿವೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಸಾಂಗ್ಸ್ ಹೇಗಿರಬಹುದು ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ದೇವಿ ಶ್ರೀ ಪ್ರಸಾದ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದು, ಫಸ್ಟ್ ಸಿಂಗಲ್ ಬಿಡುಗಡೆ ಮಾಡಲು ಚಿತ್ರತಂಡದವರು ಸಜ್ಜಾಗಿದ್ದಾರೆ.
ಅಭಿಮಾನಿಗಳಿಗೆ ಸಿಕ್ಕಿರುವ ಬಿಗ್ ಸರ್ಪ್ರೈಸ್ ಏನೆಂದರೆ, ‘ಪುಷ್ಪ 2’ ಚಿತ್ರತಂಡದವರು ಆರಂಭದಲ್ಲೇ ಟೈಟಲ್ ಸಾಂಗ್ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ಹಾಡಿನ ಹೆಸರು ‘ಪುಷ್ಪ ಪುಷ್ಪ..’. ಹಾಗಾಗಿ ಇದು ಟೈಟಲ್ ಸಾಂಗ್ ಎಂದು ಫ್ಯಾನ್ಸ್ ಊಹಿಸಿದ್ದಾರೆ. ಏ.24ರ ಸಂಜೆ ಬಿಡುಗಡೆ ಆಗುತ್ತಿರುವುದು ಬರೀ ಪ್ರೋಮೋ ಮಾತ್ರ. ಪೂರ್ತಿ ಸಾಂಗ್ ಯಾವಾಗ ಬರಲಿದೆ ಎಂಬ ಮಾಹಿತಿ ಈ ಪ್ರೋಮೋದಲ್ಲಿ ಇರಲಿದೆ.
ಈಗಾಗಲೇ ‘ಪುಷ್ಪ 2’ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಹೈಪ್ ಸೃಷ್ಟಿ ಆಗಿದೆ. ಮೊದಲ ಸಾಂಗ್ ಬಿಡುಗಡೆ ಆದ ನಂತರ ಕ್ರೇಜ್ ಇನ್ನಷ್ಟು ಹೆಚ್ಚಾಗುವುದು ಗ್ಯಾರಂಟಿ. ಅಲ್ಲು ಅರ್ಜುನ್ ಅವರ ವೃತ್ತಿಜೀವನದಲ್ಲಿ ಇದು ಅತಿ ದೊಡ್ಡ ಸಿನಿಮಾ ಆಗುವ ಎಲ್ಲ ಸಾಧ್ಯತೆ ದಟ್ಟವಾಗಿದೆ. ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದು, ವಿದೇಶಗಳಲ್ಲೂ ಪ್ರಚಾರ ಮಾಡಲಾಗುತ್ತಿದೆ. ಆಗಸ್ಟ್ 15ರಂದು ‘ಪುಷ್ಪ 2’ ಸಿನಿಮಾ ವಿಶ್ವಾದ್ಯಂತ ತೆರೆಕಾಣಲಿದೆ. ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದೆ.