ವರನಟ ಡಾ.ರಾಜ್‌ಕುಮಾರ್ ಅವರ 95ನೇ ಹುಟ್ಟುಹಬ್ಬದಂದು ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಸ್ಮಾರಕಕ್ಕೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್‌ಕುಮಾರ್ ಸ್ಮಾರಕದ ಬಳಿ ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳ, ಡಾ.ರಾಜ್ ಪುತ್ರಿ ಲಕ್ಷ್ಮಿ ದಂಪತಿ, ಅಶ್ವಿನಿ ರಾಜ್‌ಕುಮಾರ್, ಪುತ್ರಿ ವಂದಿತಾ ಆಗಮಿಸಿದ್ದಾರೆ. ಡಾ.ರಾಜ್ ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆ ಸಲ್ಲಿಸಿದ್ದಾರೆ.
ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬ. ಇಂದಿನ ಅವರ 95ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸಲು ನಾನಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಅವರ ಅಭಿಮಾನಿಗಳು. ಕರ್ನಾಟಕ ಸರ್ಕಾರ ಮತ್ತು ಡಾ.ರಾಜ್ ಕುಮಾರ್ ಸ್ಮಾರಕ ಟ್ರಸ್ಟ್ ಪ್ರತಿ ವರ್ಷದಂತೆ ಈ ವರ್ಷವೂ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿ ವರ್ಷದಂತೆ ಈ ಸಲವೂ ಡಾ.ರಾಜ್ ಪುಣ್ಯಭೂಮಿ ಸ್ಥಳದಲ್ಲಿ ಅಭಿಮಾನಿಗಳು ರಕ್ತದಾನ ಶಿಬಿರ, ಕಣ್ಣುದಾನ ಶಿಬಿರ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಬೆಳಗ್ಗೆಯಿಂದ ಈ ಎಲ್ಲ ಕೆಲಸಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲೇ ಶುರುವಾಗಲಿವೆ.
ಇವುಗಳ ಜೊತೆಗೆ ರಾಜ್ಯಾದ್ಯಂತ ಡಾ.ರಾಜ್ ಅಭಿಮಾನಿಗಳು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಅನ್ನ ಸಂತರ್ಪಣೆ, ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗಿದೆ. ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳು ನಡೆಯಲಿವೆ.