Breaking
Wed. Dec 25th, 2024

ಮತದಾನಕ್ಕೆ ಜಿಲ್ಲೆಯಲ್ಲಿ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್…!

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ 22- ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಪ್ರಿಲ್ 26ರಂದು ನಡೆಯಲಿರುವ ಮತದಾನಕ್ಕೆ ಜಿಲ್ಲೆಯಲ್ಲಿ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮತದಾನ ಪೂರ್ವ ಸಿದ್ದತೆಗಳ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 983 ಮತ್ತು ಮೈಸೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿನ 1,017 ಮತಗಟ್ಟೆಗಳು ಸೇರಿದಂತೆ ಒಟ್ಟು 2 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹೆಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 282, ನಂಜನಗೂಡು 246, ವರುಣ 261 ಹಾಗೂ ಟಿ.ನರಸೀಪುರ 228 ಸೇರಿದಂತೆ ಒಟ್ಟು 1,017 ಮತ್ತು ಹನೂರು ವಿಧಾನಸಭಾ ಕ್ಷೇತ್ರದಲ್ಲಿ 254, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 241, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 239 ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 249 ಸೇರಿದಂತೆ ಒಟ್ಟು 983 ಮತಗಟ್ಟೆಗಳು ಇವೆ. ಒಟ್ಟಾರೆ ಮತಗಟ್ಟೆಗಳ ಪೈಕಿ 263 ಮತಗಟ್ಟೆಗಳು ನಗರ ಪ್ರದೇಶದಲ್ಲಿ ಹಾಗೂ 1,737 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ ಎಂದರು.

ಜಿಲ್ಲೆಯ 4 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 983 ಮತಗಟ್ಟೆಗಳ ಪೈಕಿ 197 ಮತಗಟ್ಟೆಗಳನ್ನು ಸೂಕ್ಷ್ಮ (ಕ್ರಿಟಿಕಲ್) ಮತಗಟ್ಟೆಗಳಾಗಿ ಗುರುತಿಸಲಾಗಿದ್ದು, ಚುನಾವಣೆಯನ್ನು ಶಾಂತಿಯುತ, ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲೆಯಾದ್ಯಂತ ಒಟ್ಟು 1,667 ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಲಿಂಗ ಸಮಾನತೆ ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಸಖಿ ಶೀರ್ಷಿಕೆಯಡಿ ವಿಶೇಷ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಿ ಮಹಿಳಾ ಮತದಾರರನ್ನು ಮತದಾನಕ್ಕೆ ಪ್ರೇರೇಪಿಸಲು ಹಾಗೂ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳಲ್ಲಿ ಸಖಿ ಸೌರಭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 4 ಮತಗಟ್ಟೆಗಳಂತೆ ಒಟ್ಟು 16 ಸಖಿ ಸೌರಭ ಮತಗಟ್ಟೆಗಳನ್ನು ತೆರೆಯಲಾಗಿದೆ. ಬುಡಕಟ್ಟು ಜನರನ್ನು ಮತದಾನಕ್ಕೆ ಪ್ರೇರೇಪಿಸಲು ಆದ್ಯತೆ ನೀಡಲಾಗಿದ್ದು, ಗುಂಡ್ಲುಪೇಟೆ ತಾಲೂಕಿನಲ್ಲಿ 2 ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿಶೇಷಚೇತನರಿಗೆ ಅನುಕೂಲವಾಗುವಂತೆ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 1 ರಂತೆ 4 ವಿಶೇಷಚೇತನರ ಮತಗಟ್ಟೆಗಳನ್ನು ತೆರೆಯಲಾಗಿದೆ. ಯುವ ಮತದಾರರನ್ನು ಮತದಾನದೆಡೆ ಸೆಳೆಯಲು ಪ್ರತೀ ವಿಧಾನಸಭಾ ಕ್ಷೇತ್ರಗಳಿಗೆ ತಲಾ 2ರಂತೆ ಒಟ್ಟು 8 ಯುವ ಸೌರಭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಜಿಲ್ಲೆಯ ಸಾಂಸ್ಕøತಿಕ ಕಲೆಗಳ ಮಹತ್ವ ತಿಳಿಸಲು ಅನುಕೂಲವಾಗುವಂತೆ ಹನೂರು ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ಸಾಂಪ್ರದಾಯಿಕ ಮತಗಟ್ಟೆಗಳನ್ನು ತೆರೆಯಲಾಗಿದೆ. ರೈತರ ಮಹತ್ವವನ್ನು ಬಿಂಬಿಸುವ ಅನ್ನದಾತ ಮತಗಟ್ಟೆಗಳನ್ನು ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 2ರಂತೆ ಒಟ್ಟು 8 ಅನ್ನದಾತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅರಣ್ಯ ಮಹತ್ವ ತಿಳಿಸಲು ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1, ಕೊಳ್ಳೇಗಾಲ 1, ಚಾಮರಾಜನಗರ 2 ಹಾಗೂ ಗುಂಡ್ಲುಪೇಟೆ 2 ಸೇರಿದಂತೆ ಒಟ್ಟು 6 ಹಸಿರು ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದರು.  ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯುವ ಮತದಾರರನ್ನು ಮತದಾನದತ್ತ ಸೆಳೆಯಲು ನೈತಿಕ ಮತದಾನ ಬೆಂಬಲಿಸುವಂತೆ ಪ್ರೇರೇಪಿಸುವ ಸದುದ್ದೇಶದಿಂದ ಚಲನಚಿತ್ರ ನಟರು ಹಾಗೂ ನಿರ್ದೇಶಕರಾದ ನಾಗಭೂಷಣ್, ಬಿಗ್ ಬಾಸ್ 10ರ ವಿಜೇತರಾದ ಕಾರ್ತಿಕ್ ಮಹೇಶ್ ಅವರನ್ನು ಜಿಲ್ಲಾ ಯುವ ಚುನಾವಣಾ ರಾಯಭಾರಿಯಾಗಿ ಮತ್ತು ಮೈಸೂರು ವಿಶ್ವ ವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಸಂಶೋಧಕರು ಹಾಗೂ ಸಮತಾ ಸೊಸೈಟಿಯ ಅಧ್ಯಕ್ಷರಾದ ದೀಪಾ ಬುದ್ದೆ ಅವರನ್ನು ಜಿಲ್ಲೆಯ ತೃತೀಯ ಲಿಂಗಿಗಳ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8,78,702 ಪುರುಷರು, 8,99,501 ಮಹಿಳೆಯರು, 107 ಇತರರು ಸೇರಿದಂತೆ ಒಟ್ಟು 17,78,310 ಮತದಾರರಿದ್ದಾರೆ. ಅಲ್ಲದೇ 344 ಪುರುಷರು ಹಾಗೂ 13 ಮಹಿಳಾ ಮತದಾರರು ಸೇರಿದಂತೆ ಒಟ್ಟು 357 ಸೇವಾ ಮತದಾರರಿದ್ದಾರೆ. ಹೆಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 1,14,041 ಪುರುಷರು, 1,14,560 ಮಹಿಳೆಯರು, 12 ಇತರರು ಸೇರಿದಂತೆ ಒಟ್ಟು 2,28,613 ಮತದಾರರಿದ್ದಾರೆ. ನಂಜನಗೂಡು 1,10,369 ಪುರುಷರು, 1,12,381 ಮಹಿಳೆಯರು, 7 ಇತರರು ಸೇರಿದಂತೆ ಒಟ್ಟು 2,22,757 ಮತದಾರರಿದ್ದಾರೆ. ವರುಣ 1,19,545 ಪುರುಷರು, 1,21,391 ಮಹಿಳೆಯರು, 13 ಇತರರು ಸೇರಿದಂತೆ ಒಟ್ಟು 2,40,949 ಮತದಾರರಿದ್ದಾರೆ.

ಟಿ.ನರಸೀಪುರ 1,03,121 ಪುರುಷರು, 1,06,413 ಮಹಿಳೆಯರು, 13 ಇತರರು ಸೇರಿದಂತೆ ಒಟ್ಟು 2,09,547 ಮತದಾರರಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1,12,880 ಪುರುಷರು, 1,11,793 ಮಹಿಳೆಯರು, 10 ಇತರರು ಸೇರಿದಂತೆ ಒಟ್ಟು 2,24,683 ಮತದಾರರಿದ್ದಾರೆ. ಕೊಳ್ಳೇಗಾಲ 1,08,056 ಪುರುಷರು, 1,11,988 ಮಹಿಳೆಯರು, 21 ಇತರರು ಸೇರಿದಂತೆ ಒಟ್ಟು 2,20,065 ಮತದಾರರಿದ್ದಾರೆ. ಚಾಮರಾಜನಗರ 1,04,903 ಪುರುಷರು, 1,10,517 ಮಹಿಳೆಯರು, 15 ಇತರರು ಸೇರಿದಂತೆ ಒಟ್ಟು 2,15,435 ಮತದಾರರಿದ್ದಾರೆ. ಗುಂಡ್ಲುಪೇಟೆ 1,05,787 ಪುರುಷರು, 1,10,458 ಮಹಿಳೆಯರು, 16 ಇತರರು ಸೇರಿದಂತೆ ಒಟ್ಟು 2,16,261 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಯವರು ವಿವರಿಸಿದರು.

ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು 2 ಸಾವಿರ ಮತಗಟ್ಟೆಗಳಿಗೆ 2,559 ಬ್ಯಾಲೆಟ್ ಯೂನಿಟ್ (ಬಿಯು), 2,618 ಕಂಟ್ರೋಲ್ ಯೂನಿಟ್ (ಸಿಯು), 2,792 ವಿವಿ ಪ್ಯಾಟ್ ಹಂಚಿಕೆ ಮಾಡಲಾಗಿದೆ. ಜಿಲ್ಲೆಯ ಒಟ್ಟು 983 ಮತಗಟ್ಟೆಗಳಿಗೆ 1,196 ಪಿ.ಆರ್.ಒ, 1,196 ಎ.ಪಿ.ಆರ್.ಒ, 2,392 ಪಿ.ಒ ಸೇರಿದಂತೆ ಒಟ್ಟು 4,784 ಅಧಿಕಾರಿ ಸಿಬ್ಬಂದಿ ನಿಯೋಜಿಸಲಾಗಿದೆ. ಸದರಿ ಅಧಿಕಾರಿ ಸಿಬ್ಬಂದಿಗಳಿಗೆ 2 ಹಂತದಲ್ಲಿ ತರಬೇತಿ ನೀಡಲಾಗಿದೆ ಎಂದರು.

ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ ವಿವಿಧ ಚುನಾವಣಾ ಕೆಲಸ ಕಾರ್ಯಗಳಿಗಾಗಿ ನೇಮಕವಾಗಿರುವ ಅಧಿಕಾರಿ ಸಿಬ್ಬಂದಿಗಳಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 5,222 ಅಂಚೆ ಮತಪತ್ರಗಳನ್ನು ನೀಡಲಾಗಿದೆ. ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಮನೆಯಲ್ಲಿಯೇ ಮತದಾನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಸಂಬಂಧ ಒಟ್ಟು 1,372 ಮತದಾರರು ಮತ ಚಲಾಯಿಸಿದ್ದಾರೆ. ಚುನಾವಣಾ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿಗೆ ಏಪ್ರಿಲ್ 23ರವರೆಗೆ 6,438 ಇಡಿಸಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ.

ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ 11,341 ಹಿರಿಯ ನಾಗರಿಕ ಮತದಾರರನ್ನು ಗುರುತಿಸಲಾಗಿದೆ. ಈ ಪೈಕಿ 8,075 ಹಿರಿಯ ನಾಗರಿಕರಿಗೆ ನಮೂನೆ-12 ಡಿ ವಿತರಿಸಲಾಗಿದ್ದು, ನಮೂನೆ-12ಡಿ ಪಡೆದಿರುªವರÀ ಪೈಕಿ 350 ಮಂದಿ ಹಿರಿಯ ನಾಗರಿಕರು ಮನೆಯಲ್ಲಿಯೇ ಮತದಾನ ಮಾಡಿದ್ದು, ಉಳಿದವರು ಮತಗಟ್ಟೆಗೆ ಬಂದು ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.

ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಹೆಚ್.ಡಿ. ಕೋಟೆ ಪಟ್ಟಣದ ಸೆಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ, ನಂಜನಗೂಡು ವಿಧಾನಸಭಾ ಕ್ಷೇತ್ರದ ನಂಜನಗೂಡು ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ವರುಣ ವಿಧಾನಸಭಾ ಕ್ಷೇತ್ರಕ್ಕಾಗಿ ನಂಜನಗೂಡು ತಾಲೂಕು ದೇವಿರಮ್ಮನ ಹಳ್ಳಿಯ ಜೆಎಸ್‍ಎಸ್ ಪ್ರಥಮ ದರ್ಜೆ ಕಾಲೇಜು, ಟಿ. ನರಸೀಪುರ ವಿಧಾನಸಭಾ ಕ್ಷೇತ್ರದ ಟಿ. ನರಸೀಪುರ ಪಟ್ಟಣದ ವಿದ್ಯೋದಯ ಪದವಿ ಪೂರ್ವ ಕಾಲೇಜು ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ಹನೂರು ಪಟ್ಟಣದ ಕ್ರಿಸ್ತರಾಜ ಎಜುಕೇಷನ್ ಟ್ರಸ್ಟ್, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕೊಳ್ಳೇಗಾಲ ಪಟ್ಟಣದ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚಾಮರಾಜನಗರ ಪಟ್ಟಣದ ಕರಿನಂಜನಪುರ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದ ಹತ್ತಿರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆಯಲ್ಲಿರುವ ಸೆಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ನಡೆಯಲಿದೆ.

ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಚಾಮರಾಜನಗರದ ಬೇಡರಪುರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 4ರಂದು ನಡೆಯಲಿದೆ ಎಂದರು.  ಮತದಾನದ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಜಿಲ್ಲೆಯಲ್ಲಿ ಚುನಾವಣಾ ಜಾಗೃತಿಗಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಿವಿಧ ಮತದಾನ ಜಾಗೃತಿ ಕಾರ್ಯಕ್ರಮಗಳ ಕುರಿತು ಸವಿವರವಾಗಿ ವಿವರಿಸಿದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಭಾರತ ಚುನಾವಣಾ ಆಯೋಗ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಏಪ್ರಿಲ್ 26ರಂದು ನಡೆಯಲಿರುವ ಮತದಾನಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿಯೊಬ್ಬ ನಾಗರಿಕರು ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Related Post

Leave a Reply

Your email address will not be published. Required fields are marked *