ಹದಿಹರೆಯದವರನ್ನು ಕಾಡುವ ಸಾಮಾನ್ಯ ಸಮಸ್ಯೆ ಮೊಡವೆ. ಇದಕ್ಕೆ ಪ್ರಮುಖ ಕಾರಣ ಹಾರ್ಮೋನ್‌ಗಳ ಬದಲಾವಣೆ. ಮೊಡವೆಗಳು ಸಾಮಾನ್ಯವಾಗಿ ಮುಖದಲ್ಲಿ ಗೋಚರವಾಗುತ್ತವೆ. ಕೆಲವು ವೇಳೆ ಬೆನ್ನ ಹಿಂದೆ, ಭುಜ, ಕಿವಿ, ಎದೆಯ ಭಾಗದಲ್ಲೂ ಕಂಡುಬರುತ್ತವೆ. ಮೊಡವೆಯನ್ನು ಚಿವುಟಿದರೆ ಅದು ಶಾಶ್ವತ ಕಲೆಯಾಗುವ ಸಾಧ್ಯತೆ ಹೆಚ್ಚು. ಹೀಗಾಗಿ, ಇವುಗಳ ನೋವನ್ನು ಕಡಿಮೆ ಮಾಡಲು ಕೆಲವು ಮುನ್ನೆಚ್ಚರಿಕೆ ಕ್ರಮಗಳು ಅವಶ್ಯಕವಾಗಿದೆ.
ಮುಖ ಶುಚಿಗೊಳಿಸುತ್ತಿರಿ: ಪ್ರತಿನಿತ್ಯ ದಿನಕ್ಕೆರಡು ಬಾರಿ ಮುಖ ತೊಳೆಯಿರಿ. ಇದು ಚರ್ಮದಲ್ಲಿನ ಎಣ್ಣೆ ಅಂಶವನ್ನು ಕಡಿಮೆ ಮಾಡುತ್ತದೆ. ಸತ್ತ ಚರ್ಮ ನಿವಾರಿಸುತ್ತದೆ. ಹಾಗಂತ ಪದೇ ಪದೇ ಮುಖ ತೊಳೆಯುವುದೂ ಹಾನಿಕಾರಕ ಎಂಬುದನ್ನು ಮರೆಯಬಾರದು. ತ್ವಚೆಯ ಶುದ್ಧತೆಗೆ ಗಡುಸಾದ ಅಂಶಗಳಿಂದ ಕೂಡಿದ ಸೋಪು ಬಳಕೆ ಬೇಡ. ಇದು ತ್ವಚೆಗೆ ಮತ್ತಷ್ಟು ಕಿರಿಕಿರಿ ಉಂಟುಮಾಡುತ್ತದೆ. ಮೃದು ಸೋಪ್ ಬಳಕೆ ಒಳ್ಳೆಯದು. ಮುಖ ತೊಳೆದ ಬಳಿಕ ಟವೆಲ್ನಿಂದ ತ್ವಚೆಯನ್ನು ಉಜ್ಜಬೇಡಿ. ಮೃದು ಟವೆಲ್ನಿಂದಲೇ ನಿಧಾನವಾಗಿ ಒರೆಸಿಕೊಳ್ಳಿ.
ಮೊಡವೆಗಳನ್ನು ಪದೇ ಪದೇ ಮುಟ್ಟಬೇಡಿ: ಮೊಡವೆಗಳನ್ನು ಪದೇ ಪದೇ ಕೈಯಲ್ಲಿ ಮುಟ್ಟುವುದರಿಂದ ಬ್ಯಾಕ್ಟಿರಿಯಾಗಳು ಹರಡುತ್ತವೆ. ಇದರಿಂದ ತ್ವಚೆಯೂತ ಮತ್ತಷ್ಟು ಹೆಚ್ಚಾಗುತ್ತದೆ. ಮೊಡವೆ ಕೀಳುವುದು, ಕೆರೆಯುವುದು ಅಥವಾ ಒತ್ತುವುದನ್ನೂ ಮಾಡಬಾರದು.
ಆಯಿಂಟ್ಮೆಂಟ್ ಬಳಕೆ: ಮೊಡವೆಗಳ ನೋವು ತಗ್ಗಿಸಲಿ ಕೆಲವು ಆಯಿಂಟ್ಮೆಂಟ್ಗಳು ಲಭ್ಯವಿದೆ. ಇವುಗಳಲ್ಲಿ ಹೆಚ್ಚಾಗಿ ಬೆನ್ಜೆಯಿ ಪೆರಿಕ್ಸಿಡ್, ಸಾಲಿಸೈಲಿಕ್ ಆ್ಯಸಿಡ್, ಗ್ಲೈಕೊಲಿಕ್ ಆ್ಯಸಿಡ್ ಮತ್ತು ಲ್ಯಾಕ್ಟಿಕ್ ಆ್ಯಸಿಡ್ ಹೊಂದಿರುತ್ತದೆ. ಇವು ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತವೆ. ಆದರೆ, ಇದನ್ನು ಸ್ಪಲ್ಪ ಪ್ರಮಾಣದ ಡೋಸ್ಗಳೊಂದಿಗೆ ಬಳಸಬೇಕು. ಇದರ ಫಲಿತಾಂಶದ ಆಧಾರದ ಮೇಲೆ ಎಷ್ಟು ಬಳಕೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು.
ಮೇಕ್ಅಪ್ ಜೊತೆ ಎಚ್ಚರವಹಿಸಿ: ಮೊಡವೆಗಳ ಮೇಲೆ ಅಪ್ಪಿತಪ್ಪಿಯೂ ಫೌಂಡೇಷನ್ ಅಥವಾ ಪೌಡರ್ ಬಳಕೆ ಬೇಡ. ಮೇಕಪ್ ಬಳಕೆ ಮಾಡಿದರೆ ರಾತ್ರಿ ಸಮಯದಲ್ಲಿ ಅನ್ನು ತೆಗೆಯುವುದನ್ನು ಮರೆಯಬಾರದು. ಸಾಧ್ಯವಾದಲ್ಲಿ ಎಣ್ಣೆಮುಕ್ತ ಸೌಂದರ್ಯವರ್ಧಕ ಬಳಸಿ. ಮೊಡವೆಗಳಿಗೆ ಕಾರಣವಾಗುವ ವಸ್ತುಗಳ ಬಳಕೆ ಬೇಡ.
ಶಾಂಪೂ ಬಳಕೆಯಲ್ಲೂ ಎಚ್ಚರ: ತಲೆ ಬುಡದಲ್ಲಿರುವ ಎಣ್ಣೆಯು ಹಣೆಗಿಳಿದು ಅದು ಮೊಡವೆಗೆ ಕಾರಣವಾಗುತ್ತವೆ. ಈ ಮೂಲಕ ಈಗಾಗಲೇ ಇರುವ ಮೊಡವೆ ಕೂಡ ಮತ್ತಷ್ಟು ಕೆಟ್ಟದಾಗುತ್ತದೆ. ಈ ಹಿನ್ನೆಲೆಯಲ್ಲಿ ಮೃದು ಶಾಂಪೂ ಬಳಕೆ ಒಳ್ಳೆಯದು. ಇದು ತ್ವಚೆಯ ರಂಧ್ರತೆಗಳನ್ನು ಮುಚ್ಚುತ್ತದೆ. ಒಂದು ವೇಳೆ ಉದ್ದವಾದ ಕೂದಲಿದ್ದರೆ, ಮುಖದ ಮೇಲೆ ಅದು ಬೀಳದಂತೆ ಕಾಪಾಡಿಕೊಳ್ಳಿ.
ಸನ್ಬರ್ನ್ಗೆ ಒಳಗಾಗಬೇಡಿ: ಸೂರ್ಯನ ನೇರಳಾತೀತ ಕಿರಣಗಳು ತ್ವಚೆಯಲ್ಲಿ ಉರಿಯೂತ ಮತ್ತು ಕೆಂಪಾಗುವಿಕೆಯನ್ನು ಪ್ರಚೋದಿಸುತ್ತದೆ. ಮೊಡವೆ ಕಡಿಮೆಯಾಗಲು ಬಳಸುವ ಕ್ರೀಂಗಳು ಕೆಲವು ವೇಳೆ ಸೂರ್ಯನ ತಾಪಕ್ಕೆ ಓವರ್ರಿಯಾಕ್ಷನ್ ಆಗುತ್ತದೆ. ಈ ಹಿನ್ನೆಲೆಯಲ್ಲಿ ಬಿಸಿಲಿನಿಂದ ಸಾಧ್ಯವಾದಷ್ಟು ಮುಖವನ್ನು ರಕ್ಷಿಸಿಕೊಳ್ಳಿ.
ಆಹಾರ: ಕೊಬ್ಬಿನ ಆಹಾರಗಳನ್ನು ಕಡಿಮೆ ಮಾಡಿ. ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸಿ. ಡೈರಿ ಉತ್ಪನ್ನ ಮತ್ತು ಸ್ವೀಟ್ಗಳಲ್ಲಿರುವ ಹೆಚ್ಚಿನ ಸಕ್ಕರೆ ಮೊಡವೆಯನ್ನು ಪ್ರಚೋದಿಸುತ್ತದೆ.
ನಿಯಮಿತ ವ್ಯಾಯಾಮ: ತ್ವಚೆಯನ್ನು ಮಾತ್ರವಲ್ಲದೇ ಸಂಪೂರ್ಣ ದೇಹವನ್ನು ಆರೋಗ್ಯವಾಗಿರಿಲು ವ್ಯಾಯಾಮ ಮಾಡುವುದನ್ನು ಮರೆಯದಿರಿ.
ಶಾಂತವಾಗಿರಿ: ಕೆಲವು ವೇಳೆ ಒತ್ತಡ ಕೂಡ ಮೊಡವೆಗೆ ಪ್ರಚೋದನೆ ನೀಡುತ್ತದೆ. ಹೀಗಾಗಿ, ಮಾನಸಿಕ ಶಾಂತಿ ಕಾಪಾಡಿ. ಯೋಗ, ಧ್ಯಾನ ಇದಕ್ಕೆ ಪೂರಕ.