ಚಿತ್ರದುರ್ಗ .ಏ.25: ಲೋಕಸಭಾ ಸಾರ್ವತ್ರಿಕ ಚುನಾವಣೆಯ 2ನೇ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಏಪ್ರಿಲ್ 26 ತಾರೀಖು, ಶುಕ್ರವಾರ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯ ವರೆಗೆ ಮತಾದನ ಜರುಗಲಿದೆ. ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಿಗೆ ಮತದಾನ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜನೆ ಮಾಡುವ ಮಸ್ಟರಿಂಗ್ ಕಾರ್ಯ ನಗರದ ಸರ್ಕಾರಿ ಕಲಾ ಕಾಲೇಜಿನ ಹೊಸ ಕಟ್ಟಡದಲ್ಲಿ ಗುರುವಾರ ಜರುಗಿತು. ಸಹಾಯಕ ಚುನಾವಣಾಧಿಕಾರಿ ಹಾಗೂ ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಮಸ್ಟರಿಂಗ್ ಕಾರ್ಯದ ಉಸ್ತುವಾರಿ ವಹಿಸಿದ್ದರು.
288 ಮತಗಟ್ಟೆ 1320 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ : ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 288 ಮತಗಟ್ಟೆಗಳು ಇವೆ. ಶೇ.20 ರಷ್ಟು ಹೆಚ್ಚುವರಿ ಸಿಬ್ಬಂದಿ ಸೇರಿಸಿ, 330 ಪಿ.ಆರ್.ಓ, 330 ಎ.ಪಿ.ಆರ್.ಓ ಹಾಗೂ 660 ಪಿ.ಓ.ಗಳಿಗೆ ಎರೆಡು ಹಂತದ ಮತದಾನ ತರಬೇತಿಯನ್ನು ನೀಡಲಾಗಿದೆ. ಪ್ರತಿ ಮತಗಟ್ಟೆ ಓರ್ವ ಪಿ.ಆರ್.ಓ, ಎ.ಪಿ.ಆರ್.ಓ ಹಾಗೂ ಇಬ್ಬರು ಪಿ.ಓಗಳು ಮತದಾನದ ಕಾರ್ಯನಿರ್ವಹಿಸಲಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭೇಟಿ ಪರಿಶೀಲನೆ : ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚುನಾವಣೆ ಆಯೋಗ ಕೈಪಿಡಿಯಲ್ಲಿನ ಚೆಕ್ ಲೀಸ್ಟ್ನಂತಯೇ ಮತಗಟ್ಟೆಗಳಿಗೆ ತೆರಳುವ ಅಧಿಕಾರಿ ಹಾಗೂ ಸಿಬ್ಬಂದಿಗೆ ವಿದ್ಯುನ್ಮಾನ ಮತಯಂತ್ರ, ಮತದಾರ ಪಟ್ಟಿ, ಶಾಸನ ಬದ್ದ ಪುಸ್ತಕಗಳು, ಸ್ಪರ್ಧಿಸುತ್ತಿರುವ ಉಮೇದುವಾರರ ಪಟ್ಟಿ, ದಿನಚರಿ, ವರದಿ, ನಮೂನೆ,ಶಾಹಿ, ಕಂಪಾರ್ಟ್‌ಮೆಂಟ್ ಸೇರಿದಂತೆ ಇತರೆ ಸ್ಟೇಷನರಿ ಕಿಟ್‌ಗಳನ್ನು ಚೆಕ್ ಲೀಸ್ಟ್ನ ಕ್ರಮದಲ್ಲಿ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ಈ ಬಾರಿ ಚುನಾವಣೆ ಕಣದಲ್ಲಿ 20 ಅಭ್ಯರ್ಥಿಗಳು ಇದ್ದಾರೆ. ಇದರೊಂದಿಗೆ 1 ನೋಟಾ ಕೂಡ ಸೇರಿದೆ. ಹಾಗಾಗಿ ಮತಗಟ್ಟೆ ಸಿಬ್ಬಂದಿ 2 ಬ್ಯಾಲೆಟ್ ಯುನಿಟ್, ಒಂದು ಕಂಟ್ರೋಲ್ ಯುನಿಟ್ ಹಾಗೂ ಒಂದು ವಿವಿಪ್ಯಾಟ್‌ನ್ನು ತಮ್ಮೊಂದಿಗೆ ತೆಗೆದುಕೊಂಡು ಮತಗಟ್ಟೆ ತೆರಳಿದ್ದಾರೆ. ಮತದಾನ ಪ್ರಕ್ರಿಯೆ ಮುಗಿದ ನಂತರ ಏ.26 ರಂದು ಸಂಜೆ ನಗರದ ಸರ್ಕಾರಿ ಕಲಾ ಕಾಲೇಜಿನ ಹೊಸ ಕಟ್ಟಡದ ಡಿ ಮಸ್ಟರಿಂಗ್ ನಡೆಯಲಿದೆ.
ಮಸ್ಟರಿಂಗ್ ಕಾರ್ಯಕ್ಕೆ ನೇಮಿಸಿದ ಅಧಿಕಾರಿ ಸಿಬ್ಬಂದಿಗಳಿಗಾಗಿ ಊಟ ವ್ಯವಸ್ಥೆ ಮಾಡಲಾಗಿತ್ತು. ಊಟದಲ್ಲಿ ಪಾಯಸ, ಅನ್ನ ಸಂಬಾರ್, ಹಪ್ಪಳ, ಉಪ್ಪಿನಕಾಯಿ, ಮಜ್ಜಿಗೆ ನೀಡಲಾಯಿತು. ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಲು ಅನುಕೂಲವಾಗುವಂತೆ 52 ಕೆ.ಎಸ್.ಆರ್.ಟಿ.ಸಿ ಬಸ್‌ಗಳನ್ನು ನಿಯೋಜಿಸಲಾಗಿದೆ.