Breaking
Tue. Dec 24th, 2024

ಹೊರಗಿನವನು ಎಂದು ಅಪ ಪ್ರಚಾರ ಮಾಡಿದರು ಕ್ಷೇತ್ರದ ಜನ ಪ್ರೀತಿ ಅಭಿಮಾನದಿಂದ ಓಟ್ ಹಾಕಿದ್ದಾರೆ..!

ಚಿತ್ರದುರ್ಗ, ಏಪ್ರಿಲ್. 27 : ಕೆಲವರು ನನ್ನನ್ನು ಹೊರಗಿನವನು ಎಂದು ಅಪ ಪ್ರಚಾರ ಮಾಡಿದರು ಕ್ಷೇತ್ರದ ಜನ ಪ್ರೀತಿ ಅಭಿಮಾನದಿಂದ ಓಟ್ ಹಾಕಿದ್ದಾರೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು. 

ಚುನಾವಣೆ ಮುಗಿದ ಮರುದಿನ ಶನಿವಾರ ಇಲ್ಲಿನ ಚಾಲುಕ್ಯ ಹೋಟೆಲ್‍ನಲ್ಲಿ ಚಹ ಸೇವಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತ ಉರಿ ಬಿಸಿಲನ್ನು ಲೆಕ್ಕಿಸದೆ ಜನ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು ಎಪ್ಪತ್ತು ವರ್ಷಗಳಾಗಿದ್ದರೂ ಕುಡಿಯುವ ನೀರಿಲ್ಲ. ಯಾವ ರೀತಿ ಆಡಳಿತ ನಡೆಸಿದ್ದಾರೆಂಬುದೇ ಸೋಜಿಗ. ಈ ಕ್ಷೇತ್ರದ ಜನ ಮುಗ್ದರು, ಅಮಾಯಕರು, ಭಗವಂತ ನನಗೆ ಸೇವೆ ಮಾಡಲು ಅವಕಾಶ ಕೊಟ್ಟರೆ ಪ್ರಾಮಾಣಿಕವಾಗಿ ಅಭಿವೃದ್ದಿಗೆ ದುಡಿಯುತ್ತೇನೆ. ಸ್ಥಳೀಯವಾಗಿ ಬೇರೆ ಪಕ್ಷದ ಶಾಸಕರುಗಳಿದ್ದಾರೆ. ಚಿತ್ರದುರ್ಗ, ತುಮಕೂರು ಜಿಲ್ಲೆಯ ಪ್ರದೇಶಗಳು ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತವೆ. ಕರ್ನಾಟಕ ಆಂಧ್ರ ಗಡಿಯಲ್ಲಿ ಮತದಾರರಿದ್ದಾರೆ. ಸಮಯದ ಅಭಾವದಿಂದ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಭೇಟಿ ಮಾಡಿ ಮತಯಾಚಿಸಿದ್ದೇನೆ ಎಂದರು. 

ಹೋಬಳಿ, ಜಿಲ್ಲಾ ಮಟ್ಟದಲ್ಲಿ ಐವತ್ತರಿಂದ ಅರವತ್ತು ಸಭೆ ನಡೆಸಿದ್ದೇನೆ. ಕಾರ್ಯಕರ್ತರು, ಮುಖಂಡರುಗಳು ಚುನಾವಣೆಯಲ್ಲಿ ನನ್ನ ಪರ ಕೆಲಸ ಮಾಡಿದ್ದಾರೆ. ಮುಂದಿನ ತಿಂಗಳು ನಡೆಯುವ ಮತ್ತೊಂದು ಹಂತದ ಚುನಾವಣೆಗೆ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸುತ್ತೇನೆ. ಭಾನುವಾರ ದಾವಣಗೆರೆಗೆ ಹೋಗುತ್ತೇನೆ. ಎಲ್ಲೆಲ್ಲಿ ಪ್ರಧಾನಿ ಮೋದಿ ಬರುತ್ತಾರೋ ಅಲ್ಲೆಲ್ಲಾ ಇರುತ್ತೇನೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನರ ಸೇವೆ ಮಾಡಿದರೆ ಭಗವಂತನ ಸೇವೆ ಮಾಡಿದಂತೆ ಎಂದುಕೊಂಡಿದ್ದೇನೆಂದರು. 

ಒಂದು ಚುನಾವಣೆಯಲ್ಲಿ ನಾನು ಸೋತಿರಬಹುದು ಆದರೆ ಅಲ್ಲಿನ ಜನ ನನ್ನನ್ನು ಕೈಬಿಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡುತ್ತೇನೆ. ಮುಗಿದ ನಂತರ ನಾನು ಹತ್ತೊಂಬತ್ತು ಲಕ್ಷ ಜನ ಪ್ರತಿನಿಧಿ. ಎಲ್ಲರನ್ನು ಸಮಾನವಾಗಿ ಕಾಣಬೇಕಾಗುತ್ತದೆ. ಸೊಸೈಟಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಯಾವುದೇ ಚುನಾವಣೆ ನಡೆಯಲಿ ಪಕ್ಷದ ಗೆಲುವಿಗಾಗಿ ಶಕ್ತಿ ಮೀರಿ ಶ್ರಮಿಸುತ್ತೇನೆ. ಯಾರ ಕೈಗೆ ಅಧಿಕಾರ ಕೊಟ್ಟರೆ ದೇಶ ಸುಭದ್ರವಾಗಿರುತ್ತದೆ ಎನ್ನುವ ಅರಿವು ಕ್ಷೇತ್ರದ ಮತದಾರರಲ್ಲಿ ಮೂಡಿರುವುದು ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಅನೇಕ ತೊಂದರೆಗಳ ನಡುವೆಯೂ ಜನ ನನಗೆ ಮತ ನೀಡಿದ್ದಾರೆ. ಅದಕ್ಕಾಗಿ ಎಲ್ಲರಿಗೂ ಕೃತಜ್ಞನಾನಿದ್ದೇನೆ ಎಂದು ಹೇಳಿದರು. 

ಈ ಚುನಾವಣೆಯಲ್ಲಿ ಮತದಾರರು ಪಕ್ಷ ದೇಶಕ್ಕಾಗಿ ಬಿಸಿಲಿನಲ್ಲಿ ಸುರಿಸಿರುವ ಬೆವರಿಗೆ ಬೆಲೆ ಕಟ್ಟಲು ಆಗುವುದಿಲ್ಲ. ನರೇಂದ್ರಮೋದಿ ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಬೇಕಾಗಿರುವುದರಿಂದ ಅಭಿವೃದ್ದಿಯಲ್ಲಿ ರಾಜಕಾರಣ ಬೆರೆಸುವುದಿಲ್ಲ. ಉತ್ತರ ಕರ್ನಾಟಕದ ಹದಿನಾಲ್ಕು ಕ್ಷೇತ್ರಗಳಲ್ಲಿಯೂ ಸಂಚರಿಸಿ ಬಿಜೆಪಿ.ಗೆ ಮತ ನೀಡಿ ಎಂದು ಜನತೆಯಲ್ಲಿ ಮನವಿ ಮಾಡುತ್ತೇನೆ. ಬಿಸಿಲ ಊರು ಬಿಜಾಪುರದಲ್ಲಿ ಹುಟ್ಟಿರುವ ನನಗೆ ಇಲ್ಲಿನ ಬಿಸಿಲ ಝಳ ಅಷ್ಟಾಗಿ ತಟ್ಟಲಿಲ್ಲ. ಬಾಗಲಕೋಟೆ ಕೇವಲ 42 ಕಿ.ಮೀ. ವ್ಯಾಪ್ತಿಯಲ್ಲಿದೆ. ಆದರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರ 262 ಕಿ.ಮೀ. ವಿಸ್ತರಣೆಯಲ್ಲಿದೆ. ಆದರೂ ಎಲ್ಲಾ ಕ್ಷೇತ್ರಗಳಲ್ಲೂ ರೋಡ್‍ಶೋ ನಡೆಸಿ ಮತದಾರರ ಮನ ಸೆಳೆದಿದ್ದೇನೆ. ಅವಕಾಶ ಸಿಕ್ಕರೆ ಕ್ಷೇತ್ರದ ಅಭಿವೃದ್ದಿಗೆ ನಿಸ್ಪಕ್ಷಪಾತವಾಗಿ ದುಡಿಯತ್ತೇನೆಂದರು.

ಮತದಾನಕ್ಕೆ ಸಂಬಂಧಿಸಿದಂತೆ ಕ್ಷೇತ್ರಗಳ ಎಲ್ಲಾ ಬೂತ್‍ಗಳಿಂದ ಕಾರ್ಯಕರ್ತರು ಹಾಗೂ ಮುಖಂಡರುಗಳಿಂದ ಮಾಹಿತಿ ತರಿಸಿಕೊಂಡಿದ್ದೇನೆ. ನನಗೆ ಪೂರಕ ವಾತಾವರಣವಿರುವುದರಿಂದ ಕನಿಷ್ಟ ಎಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಚುನಾವಣೆ ಎಂದ ಮೇಲೆ ಪರ ವಿರೋಧ ಇದ್ದೆ ಇರುತ್ತದೆ. ಒಂದೆ ಮನೆಯಲ್ಲಿ ಸಹೋದರರು, ಗಂಡ-ಹೆಂಡತಿ ಸ್ಪರ್ಧಿಸುವುದನ್ನು ನೋಡಿದ್ದೇನೆ. ಪಕ್ಷದವರೆ ಕಾಲೆಳೆಯುವುದು ಸಹಜ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಇಂತಹ ವಾತಾವರಣವಿದ್ದೆ ಇರುತ್ತದೆ. ಅದೇನೋ ದೊಡ್ಡದಲ್ಲ. ಎಲ್ಲವನ್ನು ಸಹಜವಾಗಿ ಸ್ವೀಕರಿಸುತ್ತೇನೆಂದು ತಿಳಿಸಿದರು.

Related Post

Leave a Reply

Your email address will not be published. Required fields are marked *