ಚಿತ್ರದುರ್ಗ, ಏಪ್ರಿಲ್. 27 : ಕ್ಷೇತ್ರದ ಹದಿನೆಂಟುವರೆ ಲಕ್ಷ ಮತದಾರರು ಶುಕ್ರವಾರ ನಡೆದ ಚುನಾವಣೆಯಲ್ಲಿ ನನ್ನ ಭವಿಷ್ಯ ನಿರ್ಣಯಿಸುತ್ತಾರೆ. ತೀರ್ಪು ಆಶಾದಾಯಕವಾಗಿರುತ್ತೆ ಎನ್ನುವ ಅಚಲವಾದ ನಂಬಿಕೆಯಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಮುಖಂಡರುಗಳು ಸೇರಿ ಚುನಾವಣೆಯನ್ನು ಪ್ರಾಮಾಣಿಕವಾಗಿ ಎದುರಿಸಿದ್ದಾರೆ. ರಾಜ್ಯ, ರಾಷ್ಟ್ರ ನಾಯಕರುಗಳು ಇಲ್ಲಿಗೆ ಬಂದು ನನ್ನ ಪರ ಮತಯಾಚನೆ ಮಾಡಿ ಹೋಗಿದ್ದಾರೆ.
ಎಲ್ಲಿಯೂ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಮತದಾನ ಶಾಂತಿಯುತವಾಗಿ ನಡೆದಿದೆ. ಕ್ಷೇತ್ರದ ಹದಿನೆಂಟುವರೆ ಲಕ್ಷ ಮತದಾರರು, ಅಧಿಕಾರಿ ವರ್ಗದವರು ಹಾಗೂ ಪಕ್ಷಾತೀತವಾಗಿ ಸಹಕರಿಸಿದ ಮಾಧ್ಯಮದವರಿಗೂ ಕೃತಜ್ಞತೆ ಸಲ್ಲಿಸಲು ಇಚ್ಚಿಸುತ್ತೇನೆಂದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಐದು ಗ್ಯಾರೆಂಟಿಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ವರದಾನವಾಗಿದೆ ಎನ್ನುವುದು ನಿನ್ನೆ ನಡೆದ ಚುನಾವಣೆಯಲ್ಲಿ ಮಹಿಳೆಯರ ಮುಖದಲ್ಲಿನ ಭಾವನೆಗಳಲ್ಲಿ ಕಂಡು ಬರುತ್ತಿತ್ತು. ಒಟ್ಟಾರೆ ಚುನಾವಣೆ ಸುಸೂತ್ರವಾಗಿ ನಡೆದಿದೆ. ಫಲಿತಾಂಶ ಬರುವತನಕ ಸಮಾಧಾನದಿಂದ ಎಲ್ಲರೂ ಕಾಯಬೇಕು. ಅವಸರ ಮಾಡಿದರೆ ಅಪಘಾತವಾಗುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷ ಕುಮಾರ್‍ಗೌಡ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ದ್ರಾಕ್ಷಾ ರಸ ಮಂಡಳಿ ಚೇರ್ಮನ್ ಬಿ.ಯೋಗೇಶ್‍ಬಾಬು, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯಣ್ಣ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಜಿ.ವಿ.ಮಧುಗೌಡ, ಬಾಲಕೃಷ್ಣಸ್ವಾಮಿ, ಗ್ಯಾರೆಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಪ್ರೊಫೆಷನಲ್ ವಿಭಾಗದ ಅಧ್ಯಕ್ಷ ಮಹಡಿ ಶಿವಮೂರ್ತಿ, ನೇತ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.