ಚಿತ್ರದುರ್ಗ, ಏಪ್ರಿಲ್.27 : ಮೂಲಭೂತ ಸೌಲಭ್ಯಗಳಿಲ್ಲದೆ ಪರಿತಪಿಸುತ್ತಿರುವ ಯರೇಹಳ್ಳಿ ಗ್ರಾಮಸ್ಥರು ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸದೆ ಮರು ಮತದಾನ ನಡೆಸುವಂತೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವಿದ್ಯುತ್ ಇಲ್ಲದೆ ರಾತ್ರಿ ಕತ್ತಲೆಯಲ್ಲಿ ಕಾಲ ಕಳೆಯುತ್ತಿರುವ ಯರೇಹಳ್ಳಿಯಲ್ಲಿ ರೈತರ ಕೃಷಿಗೆ ತೊಂದರೆಯಾಗಿದೆ. ವಿದ್ಯಾರ್ಥಿಗಳು ರಾತ್ರಿ ವೇಳೆಯಲ್ಲಿ ಓದಲು ಕಷ್ಟಪಡುತ್ತಿದ್ದಾರೆ. ಮೊಬೈಲ್ ನೆಟ್‌ವರ್ಕ್ ಇಲ್ಲದ ಕಾರಣ ತುರ್ತು ಆ್ಯಂಬುಲೆನ್ಸ್, ಪೊಲೀಸರಿಗೆ ಕರೆ ಮಾಡಲು ಆಗುತ್ತಿಲ್ಲ. ಗುಡ್ಡದ ತುತ್ತ ತುದಿಗೇರಿ ಮೊಬೈಲ್‌ನಲ್ಲಿ ಮಾತನಾಡಬೇಕು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳಾದರೂ ಈ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಯರೇಹಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕರಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
180ಕ್ಕೂ ಹೆಚ್ಚು ಮನೆಗಳು ಈ ಗ್ರಾಮದಲ್ಲಿ 557 ಮತದಾರರಿದ್ದು, ಕೇವಲ 27 ಜನ ಮಾತ್ರ ಮತದಾನ ಮಾಡಿದ್ದಾರೆ. ಒಂದು ವಾರದೊಳಗಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸದಿದ್ದರೆ ಯರೇಹಳ್ಳಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದೆಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಎಚ್ಚರಿಕೆ ನೀಡಿದರು.
ಕರುನಾಡ ವಿಜಯಸೇನೆಯ ಯುವ ಘಟಕದ ಅಧ್ಯಕ್ಷ ನಾಗರಾಜ್‌ಮುತ್ತು, ಕಾರ್ಯದರ್ಶಿ ಅಣ್ಣಪ್ಪ, ವಿದ್ಯಾರ್ಥಿ ಘಟಕದ ಅಖಿಲೇಶ್, ಸಂಚಾಲಕ ಹರೀಶ್ ಕುಮಾರ್ ಪಿ.ಆರ್. ರಾಜ್ಯ ಸಮಿತಿಯ ಅಹಮದ್ ಪ್ರತಿಭಟನೆಯಲ್ಲಿ ಇದ್ದರು.