ಬೆಂಗಳೂರು, ಏಪ್ರಿಲ್ 28: ಯುವತಿಯ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಫೋಟೋ new_up_down_official ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ ಆರೋಪಿ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. new_up_down_official ಎಂಬ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವ ಆರೋಪಿ ಯುವತಿಯ ಭಾವಚಿತ್ರವನ್ನು ಎಡಿಟ್ ಮಾಡಿ ಮಂಗಳವಾರ ಏಪ್ರಿಲ್ 09ರ ರಾತ್ರಿ 9 ಗಂಟೆ ಸುಮಾರಿಗೆ ತನ್ನ ಪೇಜ್ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಬಳಿಕ ಯುವತಿಗೆ “5 ಸಾವಿರ ನೀಡಿದರೆ ನಿನ್ನ ಅಶ್ಲೀಲ ವಿಡಿಯೋಗಳನ್ನು ಡಿಲಿಟ್ ಮಾಡುತ್ತೇನೆ” ಎಂದು ಹೇಳಿದ್ದಾನೆ.
ಆಗ ಯುವತಿ ಈ ವಿಚಾರವನ್ನು ಪೊಲೀಸರಿಗೆ ತಿಳಿಸುತ್ತೇನೆ ಎಂದು ಹೇಳಿದ್ದಾಳೆ. ಅದಕ್ಕೆ ಆರೋಪಿ “ಪೊಲೀಸ್ನವರು ನಮ್ಮ ಮನೆಗೆ ದಿನ ಬರುತ್ತಾರೆ” ಅಂತ ಸಂದೇಶ ಕಳುಹಿಸಿದ್ದಾನೆ. ಬಳಿಕ ಯುವತಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ನೀಡಿ 8 ದಿನ ಕಳೆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಯುವತಿಯ ನಗ್ನ ಫೋಟೋ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ ಆರೋಪಿ : ಮತ್ತೊಂದು ಪ್ರಕರಣದಲ್ಲಿ, ಬೆಂಗಳೂರಿನ ಓರ್ವ ಯುವತಿಗೆ ಬ್ಲ್ಯಾಕ್ಮೇಲ್ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ಆಕೆಯ ನಗ್ನ ಫೋಟೋಗಳನ್ನು ಪಡೆದು ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಶೇರ್ ಮಾಡಿದ್ದ ಆರೋಪಿ ವಿರುದ್ಧ ದೂರು ದಾಖಲಾಗಿದೆ. ಯುವತಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ. ಯುವತಿ ತಂದೆ 16 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಾಯಿ ಮನೆ ಕೆಲಸ ಮಾಡಿಕೊಂಡು ಮಕ್ಕಳನ್ನು ಸಾಕುತಿದ್ದಾರೆ. ಕಳೆದ ವರ್ಷ 2023ರಲ್ಲಿ ಸಂತ್ರಸ್ತೆಯ ಇನ್ಸ್ಟಾಗ್ರಾಂ ಖಾತೆಗೆ bhoomikachinnu974 ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಆಕೆಯ ಕುಟಂಬದ ಹಾಗೂ ತಾಯಿಯ ಎಡಿಟ್ ನಗ್ನ ಚಿತ್ರಗಳನ್ನು ಕಳುಹಿಸಲಾಗಿದೆ.
ಬಳಿಕ ಆರೋಪಿ, ಸಂತ್ರೆಸ್ತೆಗೆ ಮೆಸೆಜ್ ಮಾಡಿ “ನಿನ್ನ ತಾಯಿಯ ಪೋಟೋಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ. ಈ ಫೋಟೋಗಳನ್ನು ಹರಿಬಿಡಬಾರದೆಂದರೇ ನಿನ್ನ ನಗ್ನ ಚಿತ್ರಗಳನ್ನು ಕಳುಹಿಸು” ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಸಂತ್ರಸ್ತೆ ಆಕೆಯ ನಗ್ನ ಚಿತ್ರಗಳನ್ನು bhoomikachinnu974 ಎಂಬ ಇನ್ಸ್ಟಾಗ್ರಾಂ ಖಾತೆಗೆ ಕಳುಹಿಸಿದ್ದಾಳೆ.
ಬಳಿಕ ಆರೋಪಿ ಈ ನಗ್ನ ಚಿತ್ರಗಳನ್ನು ಏ.09 ರಂದು ಇನ್ಸ್ಟಾಗ್ರಾಂ ಮೂಲಕ ಸಂತ್ರಸ್ತೆಯ ಸ್ನೇಹಿತರಿಗೆ ಕಳಹಿಸಿದ್ದಾನೆ. ನಂತರ Chinnu Chinnu ಎಂಬ ಫೇಸ್ಬುಕ್ ಖಾತೆಯಿಂದ ಯುವತಿಯ ಮಾವನ ಫೇಸ್ ಬುಕ್ ಖಾತೆಗೆ ಕಳುಹಿಸಿದ್ದಾನೆ. ಪ್ರಕರಣ ಸಂಬಂಧ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.