ನಟ ವಿಜಯ್ ದೇವರಕೊಂಡ ಅವರು ‘ಅರ್ಜುನ್ ರೆಡ್ಡಿ’ ಸಿನಿಮಾ ಮಾಡಿದಾಗಿನಿಂದಲೂ ಅನೇಕರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಅವರ ಸಿನಿಮಾಗಳಲ್ಲಿ ಸ್ತ್ರೀ ವಿರೋಧಿ ಅಂಶಗಳು ಇರುತ್ತವೆ ಎಂಬುದು ಅನೇಕರ ದೂರು. ಇತ್ತೀಚೆಗೆ ಅವರು ನಟಿಸಿದ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಯಿತು. ಈ ಚಿತ್ರದಲ್ಲಿನ ಒಂದು ಡೈಲಾಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೀರೋನೇ ರೇಪ್ ಬೆದರಿಕೆ ಹಾಕುವಂತಹ ಸಂಭಾಷಣೆ ಇರುವ ದೃಶ್ಯವನ್ನು ನೋಡಿ ಪ್ರೇಕ್ಷಕರಿಗೆ ಬೇಸರ ಆಗಿದೆ. ಇಂಥ ದೃಶ್ಯದ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಅಸಮಾಧಾನ ಹೊರಹಾಕಿದ್ದಾರೆ.
‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ಅವರು ಜೋಡಿಯಾಗಿ ನಟಿಸಿದ್ದಾರೆ. ಏಪ್ರಿಲ್ 5ರಂದು ಚಿತ್ರಮಂದಿರದಲ್ಲಿ ಈ ಸಿನಿಮಾ ರಿಲೀಸ್ ಆಯಿತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲು ಈ ಚಿತ್ರಕ್ಕೆ ಸಾಧ್ಯವಾಗಲಿಲ್ಲ. ಹಾಗಾಗಿ ಒಂದು ತಿಂಗಳು ಕಳೆಯುವುದರೊಳಗೆ ಒಟಿಟಿಗೆ ಬಂದಿದೆ. ಅಮೇಜಾನ್ ಪ್ರೈಂ ವಿಡಿಯೋ ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ.
ಚಿತ್ರಮಂದಿರದಲ್ಲಿ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ತೆರೆಕಂಡಾಗಲೇ ಈ ಸಂಭಾಷಣೆ ಬಗ್ಗೆ ತೆಲುಗು ಪ್ರೇಕ್ಷಕರು ತಕರಾರು ಎತ್ತಿದ್ದರು. ಈಗ ಒಟಿಟಿಯಲ್ಲಿ ಈ ಸಿನಿಮಾ ತಮಿಳಿಗೂ ಡಬ್ ಆಗಿ ತೆರೆಕಂಡಿದೆ. ತಮಿಳಿನಲ್ಲಿ ಸಿನಿಮಾ ನೋಡಿದವರು ಕೂಡ ಈ ಡೈಲಾಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ದೃಶ್ಯವನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ದೇವರಕೊಂಡ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ವಿಜಯ್ ದೇವರಕೊಂಡ ಅವರಿಂದಾಗಿ ಇಡೀ ಚಿತ್ರರಂಗಕ್ಕೆ ಕಳಂಕ ಬರುತ್ತದೆ’ ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ. ‘ವಿಜಯ್ ದೇವರಕೊಂಡ ಇದ್ದಲ್ಲಿ ಈ ರೀತಿಯ ಮಹಿಳಾ ವಿರೋಧಿ ಅಂಶ ಇದ್ದೇ ಇರುತ್ತದೆ’ ಎಂದು ಇನ್ನೊರ್ವ ಪ್ರೇಕ್ಷಕರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಸಿನಿಮಾಗೆ ಪರಶುರಾಮ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಸೋಲಿನಿಂದ ಮೃಣಾಲ್ ಠಾಕೂರ್ ಅವರಿಗೂ ಹಿನ್ನಡೆ ಆದಂತಾಗಿದೆ.