ಬೆಂಗಳೂರು : ಹಿರಿಯ ರಾಜಕಾರಣಿ, ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಇಂದು ವಿಧಿವಶರಾಗಿದ್ದಾರೆ. ನಿನ್ನೆಯಷ್ಟೇ ಸಂಸದರು ಕಾಫಿ ಕೇಳಿ ಕುಡಿದಿದ್ದರು.
ಹೌದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಸದರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿತ್ತು. ಎಲ್ಲರ ಜೊತೆ ಚೆನ್ನಾಗಿಯೇ ಮಾತನಾಡಿದ್ದರು. ಆದರೆ ಭಾನುವಾರದಿಂದ ಮಾತನಾಡಲು ಆಗುತ್ತಿರಲಿಲ್ಲ. ಹೀಗಾಗಿ ನಿನ್ನೆ ಕುಟುಂಬಸ್ಥರು ಪೆನ್ನು ಹಾಗೂ ಪೇಪರ್ ಕೊಟ್ಟಿದ್ದರು. ಆಗ ಪೇಪರ್ ನಲ್ಲಿ ಕಾಫಿ ಅಂತ ಬರೆದಿದ್ದರು. ಈ ವೇಳೆ ಕಾಫಿ ತಂದು ಕೊಟ್ಟಿದ್ದರು. ಅಂತೆಯೇ ಎರಡು ಗುಟುಕು ಕಾಫಿ ಕುಡಿದಿದ್ದರು ಎಂಬುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಸಾದ್ ಅವರು ಕೆಲ ದಿನಗಳ ಹಿಂದೆ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ನಸುಕಿನ ಜಾವ 1:27ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕುಟುಂಬಸ್ಥರು ಹಾಗೂ ಗಣ್ಯರು ಬಂದು ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ.