Breaking
Tue. Dec 24th, 2024

ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ…!

ಚಿತ್ರದುರ್ಗ, ಏಪ್ರಿಲ್. 29 : ಚಳ್ಳಕೆರೆ ತಾಲ್ಲೂಕು ಕಸಬಾ ಹೋಬಳಿ ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಏಳು ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ಜಿ.ಪಿ.ಎಸ್. ಮಾಡುವಾಗ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. 

ಚಿಕ್ಕಮಧುರೆ, ಹಿರೇಮಧುರೆ, ಉಪ್ಪಾರಹಟ್ಟಿ, ಚಿಗತನಹಳ್ಳಿ, ಗಂಜಿಗುಂಟೆ, ಲಂಬಾಣಿಹಟ್ಟಿ, ಕನ್ನೇನಹಳ್ಳಿ ಗ್ರಾಮಗಳ ರೈತರು ತೊಗರಿ ಮತ್ತು ಶೇಂಗಾಕ್ಕೆ ಬೆಳೆವಿಮೆ ಮೊತ್ತವನ್ನು ಪಾವತಿಸಿದ್ದರೂ ಸಹ ಮಳೆ ಸುರಿದು ಬೆಳೆ ಸಮೃದ್ದವಾಗಿದೆ ಎಂದು ಅಧಿಕಾರಿಗಳು ಬೆಳೆ ಸಮೀಕ್ಷೆಯಲ್ಲಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವುದರಿಂದ ರೈತರ ಖಾತೆಗಳಿಗೆ ಬೆಳೆವಿಮೆ ಜಮಾ ಆಗಿರುವುದಿಲ್ಲ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ರೈತರು ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಬೆಳೆಹಾನಿಯಿಂದ ಕೈಸುಟ್ಟುಕೊಂಡಿದ್ದಾರೆ. ಚಳ್ಳಕೆರೆ ತಾಲ್ಲೂಕಿನ ಎಲ್ಲಾ ಪಂಚಾಯಿತಿಗಳಿಗೂ ಬೆಳೆವಿಮೆ ಪರಿಹಾರವನ್ನು ಸರ್ಕಾರ ಮತ್ತು ಬೆಳೆವಿಮೆ ಕಂಪನಿಗಳು ನೀಡಿದ್ದು, ಸೋಮಗುದ್ದು ಗ್ರಾಮ ಪಂಚಾಯಿತಿಗೆ ಮಾತ್ರ ಬೆಳೆವಿಮೆ ಸಿಕ್ಕಿಲ್ಲ. ಒಂದು ವಾರದೊಳಗಾಗಿ ದಿನ ನಿಗಧಿಪಡಿಸಿ ಎಲ್ಲಾ ಇಲಾಖೆ ಅಧಿಕಾರಿಗಳನ್ನು ಕರೆಸಿ ನಷ್ಟ ಅನುಭವಿಸಿರುವ ರೈತರ ಖಾತೆಗಳಿಗೆ ಬೆಳೆವಿಮೆ ಜಮಾ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಪ್ರತಿಭಟನಾನಿರತ ರೈತರು ಜಿಲ್ಲಾಡಳಿತಕ್ಕೆ ಗಡುವು ನೀಡಿದರು. 

ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ತಾಲ್ಲೂಕು ಅಧ್ಯಕ್ಷ ಧನಂಜಯ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಪ್ರಶಾಂತ, ಕೆಂಚಪ್ಪ, ತಿಪ್ಪೇಸ್ವಾಮಿ, ಎಸ್.ನಾಗರಾಜ, ಶಶಿಧರ್, ಬಿ.ಟಿ.ಚಿದಾನಂದ, ಬಿ.ಶಿವಣ್ಣ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related Post

Leave a Reply

Your email address will not be published. Required fields are marked *