Breaking
Tue. Dec 24th, 2024

ಬೇಸಿಗೆ ಬಿಸಿಲು ಅತಿಯಾಗಿರುವುದರಿಂದ ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳುವಂತೆ ಮನವಿ …!

ಚಿತ್ರದುರ್ಗ, ಮೇ. 01 : ಈ ವರ್ಷದ ಬೇಸಿಗೆ ಬಿಸಿಲು ಅತಿಯಾಗಿರುವುದರಿಂದ ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ಬೆಳಿಗ್ಗೆ ಆರು ಗಂಟೆಯಿಂದ 11 ಗಂಟೆಯೊಳಗೆ ಹೊರಗಡೆ ಮೇಯಿಸಿ ದಿನಕ್ಕೆ ಮೂರರಿಂದ ನಾಲ್ಕು ಸಾರಿ ಶುದ್ದ ನೀರನ್ನು ಕುಡಿಸಿ ರಕ್ಷಣೆ ಮಾಡಿಕೊಳ್ಳುವಂತೆ ಜಾನುವಾರು ಸಾಕಾಣಿಕೆಯಲ್ಲಿ ತೊಡಗಿರುವವರಿಗೆ ಚಳ್ಳಕೆರೆ ತಾಲ್ಲೂಕು ನೇರ್ಲಗುಂಟೆ ಪಶು ಆಸ್ಪತ್ರೆ ಜಾನುವಾರು ಅಧಿಕಾರಿ ವಿ.ಎ.ಪ್ರಕಾಶ್‍ರೆಡ್ಡಿ ಸೂಚಿಸಿದ್ದಾರೆ. 

ಜಾನುವಾರುಗಳನ್ನು ಮರದ ಕೆಳಗೆ ಅಥವಾ ಕೊಟ್ಟಿಗೆಯಲ್ಲಿ ತಂಪಾದ ಸ್ಥಳದಲ್ಲಿ ಕಟ್ಟಬೇಕು. ಕೊಟ್ಟಿಗೆ ಮೇಲ್ಬಾಗದಲ್ಲಿ ತೆಂಗನ ಗರಿಗಳನ್ನು ಹರಡುವುದರಿಂದ ಬಿಸಿಲಿನ ತಾಪ ಕಡಿಮೆಯಾಗಲಿದೆ. ನೀರಿನ ಲಭ್ಯತೆಯಿದ್ದರೆ ದಿನಕ್ಕೆ ಒಂದೆರಡು ಸಾರಿ ಜಾನುವಾರುಗಳ ಮೈತೊಳೆಯಬಹುದು. ಉತ್ತಮ ಎಮ್ಮೆ ಮತ್ತು ಮಿಶ್ರ ತಳಿ ಹಸುಗಳಿಗೆ ನೀರಿನಲ್ಲಿ ನೆನೆಸಿದ ಗೋಣಿ ಚೀಲಗಳನ್ನು ಹೊದಿಸಿ ಆಗಾಗ್ಗೆ ನೀರು ಸಿಂಪಡಿಸುವುದರಿಂದ ಹಾಲಿನ ಇಳುವರಿ ಹೆಚ್ಚುತ್ತದೆ. ಬಿಸಿಲಿನ ತಾಪದಿಂದ ರಕ್ಷಿಸಬಹುದೆಂದು ತಿಳಿಸಿದರು.

ಒಂದು ಕೆ.ಜಿ. ಕಡಲೆಕಾಯಿ ಹಿಂಡಿಯನ್ನು ಐವತ್ತು ಲೀಟರ್ ನೀರಿನಲ್ಲಿ ನೆನೆಸಿ ನೂರು ಕುರಿಗಳಿಗೆ ಕುಡಿಸಬೇಕು. ಮೂರರಿಂದ ನಾಲ್ಕು ಕೆ.ಜಿ.ಜೋಳ ಅಥವಾ ಮುಸುಕಿನ ಜೋಳದ ಕಾಳುಗಳನ್ನು ತಿನ್ನಿಸುವುದು. ಅಗಸೆ, ನುಗ್ಗೆ, ಸೂಬಾಬುಲ್‍ನಂತಹ ಮೇವನ್ನು ಕೊಡಬೇಕು. ಜಾನುವಾರುಗಳು ಕುಡಿಯುವ ನೀರಿನ ತೊಟ್ಟಿಗೆ ಸುಣ್ಣ ಬಳಿದು ಸ್ವಚ್ಚಗೊಳಿಸಬೇಕು. ಹೀಗೆ ಮಾಡುವುದರಿಂದ ಜಾನುವಾರುಗಳನ್ನು ಬಿಸಿಲಿನ ಝಳದಿಂದ ಕಾಪಾಡಬಹುದು ಎಂದು ಜಾನುವಾರುಗಳ ಮಾಲೀಕರುಗಳಿಗೆ ಹೇಳಿದರು. 

Related Post

Leave a Reply

Your email address will not be published. Required fields are marked *