Breaking
Tue. Dec 24th, 2024

ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಒಂದಿಲ್ಲೊಂದು ಎಡವಟ್ಟುಗಳು ನಡೆಯುತ್ತಲೇ ಇದೆ.

ಶಿವಮೊಗ್ಗ : ಲೋಕಸಭಾ ಚುನಾವಣೆ ಘೋಷಣೆ ಆದಾಗಿನಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಕುರಿತು ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಒಂದಿಲ್ಲೊಂದು ಎಡವಟ್ಟುಗಳು ನಡೆಯುತ್ತಲೇ ಇದೆ.

ಮೇ ೭ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದ್ದು, ಈಗಾಗಲೇ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮತ್ತು ಪಕ್ಷೇತರ (ಬಿಜೆಪಿ ಬಂಡಾಯ) ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರಗಳು ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ವಿಶೇಷವಾಗಿ ಜಿಲ್ಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿ ವಿಧಾನ ಕ್ಷೇತ್ರದಲ್ಲಿ ಜೆಡಿಎಸ್ ಅತ್ಯಂತ ಬಲಿಷ್ಟವಾಗಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀಮತಿ ಶಾರದಾ ಪೂರ್‍ಯಾನಾಯ್ಕ ಹಾಲಿ ಶಾಸಕರಾಗಿದ್ದರೆ, ಭದ್ರಾವತಿಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶಾರದಾ ಅಪ್ಪಾಜಿ ಗೌಡ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ಈ ಎರಡು ವಿಧಾನ ಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಜಿಲ್ಲೆಯ ಇನ್ನುಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಷ್ಟೇನು ಪ್ರಾಭಲ್ಯ ಹೊಂದಿಲ್ಲ. ಅಲ್ಲದೆ ಜಿಲ್ಲಾ ಜೆಡಿಎಸ್ ನಲ್ಲಿ ಕೂಡ ಎಂ.ಶ್ರೀಕಾಂತ್ ಜೆಡಿಎಸ್ ತ್ಯಜಿಸಿದ ನಂತರ ಪಕ್ಷ ಸಂಘಟನೆ ದೃಷ್ಟಿಯಲ್ಲಿ ಸ್ಟ್ರಾಂಗ್ ಅಂಡ್ ಮಾಸ್ ಲೀಡರ್‌ಗಳ ಕೊರತೆ ಎದ್ದುಕಾಣುತ್ತಿದೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸುಮಾರು ೩ ಸಾವಿರ ಮತಗಳು ಬರುತ್ತಿದ್ದವು. ಆದರೆ ಎಂ. ಶ್ರೀಕಾಂತ್ ಅವರು ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತ ನಂತರ ಅದು ೨೩ ಸಾವಿರಕ್ಕೂ ಅಧಿಕ ಮತಗಳಿಗೆ ಹೆಚ್ಚಳ ವಾಯಿತು.

ಅವರ ನಂತರ ಸ್ಪರ್ಧಿಸಿದ್ದ ನಿವೃತ್ತ ಇಂಜಿನಿಯರ್ ನಿರಂಜನ್ ಅವರಿಗೆ ವಿಧಾನಸಭಾ ಚುನಾವಣೆ ಯಲ್ಲಿ ಸ್ವಪಕ್ಷೀಯರ ಅಸಹಕಾರದ ನಡುವೆಯೂ ೫ಸಾವಿರಕ್ಕೂ ಅಧಿಕ ಮತಗಳನ್ನು ತಮ್ಮ ಸ್ವಸಾಮರ್ಥ್ಯದಿಂದ ಪಡೆದಿದ್ದರೆ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಲಿಷ್ಠ ಕಾರ್ಮಿಕ ಮುಖಂಡ ಆಯ್ನೂರ್ ಮಂಜುನಾಥ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ದ್ದರು. ಅವರಿಗೆ ಅಂದಿನ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಮಾಜಿ ಶಾಸಕ ಹಾಗೂ ಹಾಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಮತ್ತು ತಂಡ ಹಾಗೂ ಇಡೀ ಜಿಲ್ಲಾ ಜೆಡಿಎಸ್ ಪ್ರಮುಖರ ಸಹಕಾರವಿದ್ದರೂ ಸಹ ಅವರು ಗಳಿಸಿದ್ದು ಕೇವಲ ೭ಸಾವಿರ ಪ್ಲಸ್ ಮತಗಳು.

  ಇನ್ನುಳಿದಂತೆ ಸಾಗರ, ತೀರ್ಥಹಳ್ಳಿ, ಸೊರಬ, ಶಿಕಾರಿಪುರ, ಬೈಂದೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಭಲ್ಯ ಅಷ್ಟಕ್ಕಷ್ಟೇ ಎನ್ನಬಹುದು.

ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಲೋಕಸಭಾ ಸಭಾ ಚುನಾವಣೆಗೆ ಮೈತ್ರಿ ಧರ್ಮ ಪಾಲಿಸುವಲ್ಲಿ ಬಿಜೆಪಿ ಪ್ರತಿ ಹೆಜ್ಜೆಯಲ್ಲೂ ಎಡವುತ್ತಿದೆ. ಮೈತ್ರಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಕರಪತ್ರದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಜೆಡಿಎಸ್ ಕೋರ್ ಕಮಿತಿ ಸದಸ್ಯ ಕೆ.ಬಿ. ಪ್ರಸನ್ನಕುಮಾರ್ ಮತ್ತು ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್ ಅವರ ಭಾವಚಿತ್ರ ಮಾತ್ರ ಮುದ್ರಿಸಲಾ ಗಿದ್ದು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕಿ ಶಾರದಾ ಪೂರ್‍ಯಾ ನಾಯ್ಕ ಹಾಗೂ ಭದ್ರಾವತಿ ಕ್ಷೇತ್ರದ ಪ್ರಮುಖ ನಾಯಕಿ ಶಾರದಾ ಅಪ್ಪಾಜಿ ಗೌಡರ ಫೋಟೋಗಳನ್ನು ಕೈಬಿಟ್ಟಿರು ವುದು ಏಕೆ ಎಂಬ ಪ್ರಶ್ನೆ ಕಾಡುತ್ತಿದ್ದು, ಇದು ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿ ಭಾಗದ ಜೆಡಿಎಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲಾ ಜೆಡಿಎಸ್ ಮಟ್ಟಿಗೆ ಶಿವಮೊಗ್ಗ ಗ್ರಾಮಾಂತರ ಜೆಡಿಎಸ್‌ನ ಹಾಲಿ ಶಾಸಕಿ ಹಾಗೂ ಶಾಸಕಾಂಗ ಪಕ್ಷ ಉಪನಾಯಕಿ ಶಾರದಾ ಪೂರ್‍ಯಾನಾಯ್ಕ ಮತ್ತು ಭದ್ರಾವತಿ ವಿಧಾನ ಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿಗೌಡ ಅವರೇ ಪ್ರಮುಖ ನಾಯಕರಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಅಧಿಕ ಸಂಖ್ಯೆಯ ಮತಗಳನ್ನು ಬರುವಂತೆ ಮಾಡುವ ಶಕ್ತಿಹೊಂದಿದ್ದಾರೆ.

ಜಿಲ್ಲಾ ಜೆಡಿಎಸ್‌ನಲ್ಲಿ ಶಾಸಕಿ ಶಾರದಾ ಪೂರ್‍ಯಾನಾಯ್ಕ ಅವರು ಬಲಿಷ್ಠ ನಾಯಕಿಯಾಗಿದ್ದಾರೆ. ಅವರು ಈ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿ ಒಮ್ಮೆ ಅಲ್ಪ ಮತಗಳಿಂದ ಪರಾಭವಗೊಂಡಿದ್ದು, ಎರಡು ಬಾರಿ ವಿಜಯಮಾಲೆ ಧರಿಸಿ ಈಗ ಎರಡನೇ ಬಾರಿಗೆ ಹಾಲಿ ಶಾಸಕರಾದ್ದಾರೆ. ಆದರೆ ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಜೆಡಿಎಸ್‌ನ ಪಕ್ಷನಿಷ್ಠ ನಾಯಕಿಯ ಕಡೆಗಣನೆ ಪಕ್ಷದ ಮೂಲ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

 

 

ಇತ್ತ ಭದ್ರಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಗೂ ಪ್ರಶ್ನಾತೀತ ನಾಯಕರಾಗಿದ್ದ ಅಪ್ಪಾಜಿ ಗೌಡರ ನಿಧನಾನಂತರ ಅವರ ಧರ್ಮಪತ್ನಿ ಶಾರದಾ ಅಪ್ಪಾಜಿಗೌಡ ಅವರು ರಾಜಕೀಯವಾಗಿ ಮುನ್ನಲೆಗೆ ಬಂದು ಅಪ್ಪಾಜಿಗೌಡರ ಸ್ಥಾನ ಅಲಂಕರಿಸುವ ಮೂಲಕ ಈ ಭಾಗ ಬಲಿಷ್ಠ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಬಿಜೆಪಿ ಕರಪತ್ರದಲ್ಲಿ ಇವರ ಕಡೆಗಣನೆ ಈ ಕ್ಷೇತ್ರದ ಕಾರ್ಯಕರ್ತರು ಮತ್ತು ನಾಯಕರಲ್ಲಿ ಆಕ್ರೊಶ ಬುಗಿಲೇಳುವಂತೆ ಮಾಡಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕೆಲವೆಡೆ ಬಿಜೆಪಿ ನಾಯಕರು ಜೆಡಿಎಸ್‌ನ ಬಲಿಷ್ಠ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಜೆಡಿಎಸ್ ಪ್ರಾಭಲ್ಯವಿರುವ ಈ ಎರಡು ಕ್ಷೇತ್ರಗಳ ಪ್ರಬಲ ನಾಯಕಿಯರ ಫೋಟೋಗಳನ್ನೇ ಕರಪತ್ರದಲ್ಲಿ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ಇದೀಗ ಜೆಡಿಎಸ್ ಪಾಳೇಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಏ.೨೯ರಂದು ನಗರದ ಹೊರವಲಯದ ಪ್ರೇರಣಾ ಕನ್ವೆಷನ್ ಹಾಲ್‌ನಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಮತ್ತು ನಾಯಕರ ಸಭೆ ಕರೆಯಲಾಗಿತ್ತು, ಈ ಸಭೆಯಲ್ಲಿ ಪಾಲ್ಗೊಂಡಿದ್ದ ಈ ಭಾಗದ ಕಾರ್ಯಕರ್ತರು ಮತ್ತು ನಾಯಕರ ಸಂಖ್ಯೆಯನ್ನು ಗಮನಿಸಿದರೆ ಶಾಸಕಿ ಶಾರದಾ ಪೂರ್‍ಯಾನಾಯ್ಕ ಅವರ ಜನಪ್ರಿಯತೆ ಮತ್ತು ಪ್ರಾಭಲ್ಯ ತಿಳಿಯುತ್ತದೆ ಎಂದು ಸ್ವತಃ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಸ್ವಪಕ್ಷೀಯ ಮಾಜಿ ಶಾಸಕರ ಸಮ್ಮುಖದಲ್ಲಿ ಹೇಳಿದರು. ಆದರೆ ಸಂಸದ ಬಿವೈಆರ್ ಅವರು ಚುನಾವಣಾ ಕರಪತ್ರವನ್ನು ಗಮನಿಸಲಿಲ್ಲವೇ ಎಂದು ಅಲ್ಲಿ ನೆರೆದಿದ್ದ ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದರು.

Related Post

Leave a Reply

Your email address will not be published. Required fields are marked *