ಬೆಳಗಾವಿ : ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಚನ್ನಮ್ಮ ವೃತ್ತದಲ್ಲಿ ಶನಿವಾರ (ಮೇ 4) ಹಮ್ಮಿಕೊಂಡಿದ್ದ ಕಡ್ಡಾಯ ಮತದಾನ ಜಾಗೃತಿ ಬೈಕ್ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಸಿಇಒ ರಾಹುಲ್ ಶಿಂಧೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಡಾ.ಭಿಮಾಶಂಕರ ಗುಳೆದ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಮಾತನಾಡಿ, ಈಗಾಗಲೇ ಜಿಲ್ಲೆಯಾದ್ಯಂತ ಸ್ವೀಪ್ ಸಮಿತಿಯ ಮೂಲಕ ಮತದಾರರಲ್ಲಿ ಮತದಾನದ ಜಾಗೃತಿ ಮಾಡಲಾಗುತ್ತಿದೆ. ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂದು ಸ್ವೀಪ್ ಚಟುವಟಿಕೆಯಡಿ ಕೊನೆಯ ಕಾರ್ಯಕ್ರಮವಾದ ಬುಲೆಟ್ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ. ಎಲ್ಲ ಮತದಾರರು ಮೇ-7 ರಂದು ಜರುಗುವ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಜಾಥಾ ಕಾರ್ಯಕ್ರಮವು ನಗರದ ಚನ್ನಮ್ಮ ವೃತ್ತದಲ್ಲಿ ಪ್ರಾರಂಭವಾಗಿ ಕಾಲೇಜು ರಸ್ತೆ, ಬೋಗಾರವೇಸ್, ಗೋವಾವೆಸ್, ಶಿವಾಜಿ ಗಾರ್ಡನ್ ಪೊರ್ಟ ರೋಡ್, ಬಸ್ ನಿಲ್ದಾಣ, ಆರ್.ಟಿ.ಓ ವೃತ್ತಕ್ಕೆ ಮುಕ್ತಾಯಗೊಳಿಸಲಾಯಿತು. ಶ್ರೀ ಮುನೇಶ್ವರ ರೈಡರ್ ಗ್ರೂಪ್ ಹಾಗೂ ಬೆಳಗಾವಿ ಬುಲೆಟ್ ಗುರುಸ್ ಇವರ ಸಹಯೋಗದೊಂದಿಗೆ ಸುಮಾರು 45 ಕ್ಕು ಹೆಚ್ಚು ಬುಲೆಟ್ ಬೈಕ್ ಗಳೊಂದಿಗೆ ದಾರಿ ಉದ್ದಕ್ಕು ಸಾರ್ವಜನಿಕರಿಗೆ ನಾಮಫಲಕ ಪ್ರದರ್ಶನ, ಕರಪತ್ರಗಳ ಹಂಚಿಕೆ ಮೂಲಕ ಕಡ್ಡಾಯ ಮತದಾನ ಜಾಗೃತಿ ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಡಾ: ಎಮ್ ಕೃಷ್ಣರಾಜು, ಲೆಕ್ಕಾಧಿಕಾರಿಯಾದ ಗಂಗಾ ಹಿರೇಮಠ, ಜಿಲ್ಲಾ ಐ.ಇ.ಸಿ ಸಂಯೋಜಕರಾದ ಪ್ರಮೋದ ಗೋಡೆಕರ ಬಾಹುಬಲಿ ಮೆಳವಂಕಿ, ತಾಂತ್ರಿಕ ಸಂಯೋಜಕ ಮುರಗೇಶ ಯಕ್ಕಂಚಿ, ದತ್ತಾತ್ರೇಯ ಚವ್ಹಾಣ, ಲಿಂಗರಾಜ್ ಜಗಜಂಪಿ, ಅಬ್ದುಲ್ ಬಾರಿ ಯರಗಟ್ಟಿ, ಅಭಿಜಿತ ಚವ್ಹಾಣ ಮತ್ತಿತರು ಉಪಸ್ಥಿತರಿದ್ದರು.