ಹಳ್ಳಿಗಳ ಬೆಳೆ ವಿಮೆಯನ್ನು ಪುನಃ ಪರಿಶೀಲಿಸಿ ಎಲ್ಲಾ ರೈತರ ಬ್ಯಾಂಕ್ ಖಾತೆಗಳಿಗೆ ವಿಮೆ ಹಣ ಪಾವತಿಸಿ ಬರ ಪರಿಹಾರ ತುರ್ತಾಗಿ ನೀಡಬೇಕು…!

ಚಿತ್ರದುರ್ಗ, ಮೇ. 06 : ಚಳ್ಳಕೆರೆ ತಾಲ್ಲೂಕಿನ ಸಿದ್ದೇಶ್ವರನದುರ್ಗ, ಸೋಮಗುದ್ದು ಗ್ರಾಮ ಪಂಚಾಯಿತಿಗಳಿಗೆ ಸೇರಿದ ಹಳ್ಳಿಗಳ ಬೆಳೆ ವಿಮೆಯನ್ನು ಪುನಃ ಪರಿಶೀಲಿಸಿ ಎಲ್ಲಾ ರೈತರ ಬ್ಯಾಂಕ್ ಖಾತೆಗಳಿಗೆ ವಿಮೆ ಹಣ ಪಾವತಿಸಿ ಬರ ಪರಿಹಾರ ತುರ್ತಾಗಿ ನೀಡಬೇಕೆಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಚಳ್ಳಕೆರೆ ತಾಲ್ಲೂಕು ಶಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. 

ಬೆಳೆ ಸಮೀಕ್ಷೆಯಲ್ಲಿ ಅಧಿಕಾರಿಗಳು ತಾರತಮ್ಯವೆಸಗಿರುವುದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಇನ್ಸುರೆನ್ಸ್ ಹಣವನ್ನು ಪಿ.ಎಂ.ಕಿಸಾನ್, ಎಸ್.ಎಸ್.ವೈ. ಹಣವನ್ನು ಬ್ಯಾಂಕ್ ಸಾಲಕ್ಕೆ ಜಮ ಮಾಡಿರುವುದನ್ನು ರದ್ದುಪಡಿಸಿ ರೈತರಿಗೆ ಹಣ ಪಾವತಿ ಮಾಡಬೇಕು. ಸೂರನಹಳ್ಳಿ ಮಾರ್ಗದಿಂದ ಮರಿಕುಂಟೆ ಮಾರ್ಗವಾಗಿ ಸರ್ಕಾರಿ ಬಸ್ ಸಂಚಾರ ಆರಂಭಿಸುವಂತೆ ಚಳುವಳಿ ನಡೆಸಿದ್ದರೂ ಇದುವರೆವಿಗೂ ಬಸ್ ವ್ಯವಸ್ಥೆಯಿಲ್ಲ. 

ಪರಶುರಾಂಪುರ ಹೋಬಳಿ ಚೌಳೂರು ಗ್ರಾಮದ ರಿ.ಸ.ನಂ. 152 ರಲ್ಲಿ 1989-90 ನೇ ಸಾಲಿನಲ್ಲಿ ಸಾಗುವಳಿ ನೀಡಿದ್ದು, ಇದುವರೆವಿಗೂ ದುರಸ್ತಿ ಕಾಣದೆ ಹದ್ದುಬಸ್ತ್ ಆಗಿರುವುದಿಲ್ಲ. ಬಿತ್ತನೆ ಸಮಯದಲ್ಲಿ ಹಲವು ರೈತರು ಗಲಾಟೆ ಮಾಡಿಕೊಂಡು ಕೋರ್ಟ್‍ಗೆ ಅಲೆದಾಡುತ್ತಿದ್ದಾರೆ. ತುರ್ತಾಗಿ ದುರಸ್ಥಿಗೊಳಿಸುವಂತೆ ಪ್ರತಿಭಟನಾನಿರತ ರೈತರು ಒತ್ತಾಯಿಸಿದರು. 

ರೈತ ಮುಖಂಡರುಗಳಾದ ಚಿಕ್ಕಣ್ಣ, ಜಂಪಣ್ಣ, ಖಾದರ್‍ಭಾಷ, ನವೀನ್‍ಗೌಡ, ರುದ್ರಣ್ಣ, ಜಯಮ್ಮ, ತಿಮ್ಮಣ್ಣ, ಎಂ.ಲಕ್ಷ್ಮಿದೇವಿ, ಪರಮೇಶ್ವರಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Related Post

Leave a Reply

Your email address will not be published. Required fields are marked *