ಚಿತ್ರದುರ್ಗ, ಮೇ. 07 : ಅಣು ಬೋಧನೆ ಎನ್ನುವುದು ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಸೂಕ್ಷ್ಮವಾಗಿ ಪಾಠ ಮಾಡುವ ಒಂದು ವಿಧಾನ ಎಂದು ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಅರ್ಚನ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಅಣು ಬೋಧನಾ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಿ.ಇ.ಡಿ. ವಿದ್ಯಾರ್ಥಿಗಳ ಬೋಧನೆಗೆ ಅವಶ್ಯವಿರುವ ಕೌಶಲ್ಯಗಳ ತರಬೇತಿ ನೀಡಲು ಇದೊಂದು ಪ್ರಾಯೋಗಿಕ ಕಾರ್ಯಾಗಾರವಾಗಿದ್ದು, ಬೋಧನೆಯ ಹಲವಾರು ಕೌಶಲ್ಯಗಳನ್ನು ಅಭ್ಯಾಸ ಮಾಡಿ ಕರಗತ ಮಾಡಿಕೊಳ್ಳುವುದು ಅಣು ಬೋಧನೆಯ ವಿಧಾನ ಎಂದು ಹೇಳಿದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಜಯಲಕ್ಷ್ಮಿ ಮಾತನಾಡಿ ಯೋಜನೆ, ಬೋಧನೆ, ಪುಷ್ಠೀಕರಣ, ಪುನರ್ ಯೋಜನೆ, ಪುನರ್ ಬೋಧನೆ, ಪುನರ್ ಪುಷ್ಠೀಕರಣ ಅಣು ಬೋಧನೆಯ ವಿಧಾನಗಳು ಎಂದು ತಿಳಿಸಿದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್, ಉಪ ಪ್ರಾಂಶುಪಾಲರಾದ ಹೆಚ್.ಎನ್.ಶಿವಕುಮಾರ್, ಉಪನ್ಯಾಸಕರುಗಳಾದ ಡಾ.ಹನುಮಂತರೆಡ್ಡಿ, ಪದ್ಮಶ್ರಿ, ಮಂಜಪ್ಪ ಎಸ್. ಇವರುಗಳು ವೇದಿಕೆಯಲ್ಲಿದ್ದರು.