ಚಿಕ್ಕಮಗಳೂರು : ನನ್ನ ಹೆಸರು ಹೇಳದೇ ಇದ್ದರೆ ಕುಮಾರಸ್ವಾಮಿಗೆ ನಿದ್ದೆಯೇ ಬರುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಜಿ ಸಿಎಂ ಹೆಚ್ ಡಿಕೆ ತಿರುಗೇಟು ನೀಡಿದ್ದಾರೆ.
ರಾಜ್ಯವ್ಯಾಪಿ ಪೆನ್‌ಡ್ರೈವ್ ಹಂಚಿದ್ದು ಡಿಕೆ ಶಿವಕುಮಾರ್ ಮತ್ತು ತಂಡ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಆರೋಪ ಮಾಡದಿದ್ದರೆ ಮಾರುಕಟ್ಟೆಯಲ್ಲಿ ಸುದ್ದಿ ಇಲ್ಲ. ನನ್ನ ಹೆಸರು ಇರದಿದ್ದರೆ ನೀವು ತೋರಿಸುವುದಿಲ್ಲ. ಕಥಾನಾಯಕ, ನಿರ್ಮಾಪಕ, ನಿರ್ದೇಶಕ ಎಲ್ಲಾ ಇವರೇ ಎಂದು ಕಿಡಿಕಾರಿದರು.
ಪೆನ್ ಡ್ರೈವ್ ವಿಚಾರ ಎಲ್ಲವೂ ಕುಮಾರಸ್ವಾಮಿಗೆ ಗೊತ್ತಿದೆ. ಕುಮಾರಣ್ಣನಿಗೆ ನನ್ನ ರಾಜೀನಾಮೆ ಬೇಕಂತೆ. ಒಕ್ಕಲಿಗ ನಾಯಕರ ಪೈಪೋಟಿಯಂತೆ. ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಹೆದರಿಸುವುದೇ ಇವರ ಕೆಲಸ. ಕುಮಾರಸ್ವಾಮಿ ಕಿಂಗ್ ಆಫ್ ಬ್ಲಾಕ್‌ಮೇಲ್. ಮಾಡಲು ಚರ್ಚೆ ಸದನ ಇದೆ. ಎಲ್ಲವನ್ನೂ ತಗೆದುಕೊಂಡು ಬರಲಿ ಚರ್ಚೆ ಮಾಡೋಣ ಎಂದರು.
ಅವರದ್ದೇ ಬೇರೆ ಫ್ಯಾಮಿಲಿ ನಮ್ಮದೇ ಬೇರೆ ಫ್ಯಾಮಿಲಿ. ಉಪ್ಪು ತಿಂದವನು ನೀರು ಕುಡಿಯಬೇಕು ಎಂದವರು ಈಗ ಯಾಕೆ ಉರಿ ಮಾಡಿಕೊಳ್ಳುತ್ತಿದ್ದಾರೆ. ಇವರು ಲಾಯರ್ರಾ? ಜಡ್ಜಾ? ಹೋಗಿ ವಾದ ಮಾಡಲಿ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ಮುಗಿದ ಬಳಿಕ ಚಿಕ್ಕಮಗಳೂರು ಹೊರವಲಯದಲ್ಲಿರುವ ಸೆರಾಯ್ ರೆಸಾರ್ಟ್‌ಗೆ ಡಿಕೆ ಶಿವಕುಮಾರ್ ಅವರ ಕುಟುಂಬದ ಸದಸ್ಯರು ಆಗಮಿಸಿದ್ದಾರೆ. ಇಂದು ಬೆಳಗ್ಗೆ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಹಾಗೂ ಮಾಜಿ ಪರಿಷತ್ ಸದಸ್ಯೆ ಗಾಯತ್ರಿ ಶಾಂತಗೌಡ ಮತ್ತು ಜಿಲ್ಲಾ ಘಟಕದ ಪ್ರಮುಖ ಮುಖಂಡರ ಜೊತೆ ಉಪಹಾರ ಸೇವಿಸುತ್ತಾ ಚರ್ಚೆ ನಡೆಸಿದರು.