ಶಿವಮೊಗ್ಗ : ನಿನ್ನೆ ಸಂಜೆ ಶಿವಮೊಗ್ಗದ ಮೀನು ಮಾರುಕಟ್ಟೆ ಬಳಿ ಜನರೆಲ್ಲ ಬೆಚ್ಚಿ ಬೀಳುವಂತೆ ಘಟನೆಯೊಂದು ನಡೆದಿದೆ. ಸಂಜೆ 6 ಗಂಟೆಯ ವೇಳೆಗೆ ಹಳೇ ದ್ವೇಷದಿಂದ ಇಬ್ಬರು ರೌಡಿಶೀಟರ್ ಗಳ ಬರ್ಬರ ಹತ್ಯೆಯಾಗಿದೆ. ಇದೇ ಗಲಾಟೆಯಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ರೌಡಿ ಶೀಟರ್ ಖುರೇಶಿ ಕೂಡ ಸಾವನ್ನಪ್ಪಿದ್ದಾನೆ. ರೌಡಿಶೀಟರ್ ಖುರೇಶಿ ಮಟನ್ ಸ್ಟಾಲ್ ನಲ್ಲಿ ಇದ್ದಿದ್ದನ್ನು ಖಚಿತಪಡಿಸಿಕೊಂಡು ಶೋಹಿಲ್ ಮತ್ತು ಗೌಸ್ ತಂಡ ಏಕಾಏಕಿ ದಾಳಿ ನಡೆಸಿದೆ.
ಮಚ್ಚು, ಲಾಂಗ್ ನಿಂದ ಬೀಸಿದ್ದಾರೆ. ಇದರಿಂದ ಖುರೇಶಿ ಹುಡುಗರು ಕೂಡ ರೊಚ್ಚಿಗೆದ್ದಿದ್ದು, ಪ್ರತಿ ದಾಳಿ ನಡೆಸಿದ್ದಾರೆ. ಶೋಹಿಲ್ ಹಾಗೂ ಗೌಸ್ ಗ್ಯಾಂಗ್, ಚಪ್ಪಡಿ ಕಲ್ಲು, ಸೈಕಲ್ ಎತ್ತಿ ಹಾಕಿ ಇಬ್ಬರನ್ನು ಕೊಂದೇ ಬಿಟ್ಟರು. ಬಳಿಕ ಅಲ್ಲಿಂದ ಪುಡಿ ರೌಡಿಗಳು ಎಸ್ಕೇಪ್ ಆದರು. ಖುರೇಶಿಯನ್ನು ತಕ್ಷಣ ನಾರಾಯಣ ಹೃದಯಾಲಯಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸಲಾದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದನು. ಸೇಬು ಹಾಗೂ ಗೌಸ್ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇವರು ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ಭಾಗಿ ಆಗಿರುವ ಶಂಕೆ ಇದೆ. ಹೀಗಾಗಿ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ. ಬೀದಿ ಬೀದಿಯಲ್ಲಿಯೇ ಮಚ್ಚು, ಲಾಂಗು ಝಳಪಿಸಿದ್ದು, ಶಿವಮೊಗ್ಗದ ಜನತೆ ಬೆಚ್ಚಿ ಬಿದ್ದಿದ್ದಾರೆ. ಪೊಲೀಸರು ಕೂಡ ತೀವ್ರ ತನಿಖೆ ನಡೆಸುತ್ತಿದ್ದಾರೆ.