ವೀ­ರಭದ್ರೇಶ್ವರ ಜಾತ್ರಾ ಮಹೋತ್ಸವ ಅನೇಕ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು…!

ವಿಜಯನಗರ, ಹೂವಿನ ಹಡಗಲಿ : ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಗುರುವಾರ ಸಂಜೆ 5 ಗಂಟೆಗೆ ವೀ­ರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ಅನೇಕ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.

ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತಸಮೂಹ ಹರಹರ ಮಹಾದೇವ ಎಂದು ಜಯಘೋಷ ಹಾಕುತ್ತಾ ಭಜನೆ, ಝಾಂಜಮೇಳ, ಡೊಳ್ಳು, ಸಂಗೀತ ವಾದ್ಯ ವೈಭವದಿಂದ ನಂದಿಕೊಲು, ಛತ್ರ ಚಾಮರಗಳೊಂದಿಗೆ ಭಕ್ತಿ ಭಾವದಿಂದ ಭಕ್ತರು ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ನಮನ ಸಲ್ಲಿಸಿದರು. 

ರಥೋತ್ಸವಕ್ಕೆ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಭಕ್ತ ಸಮೂಹ ಹಣ್ಣುಕಾಯಿ, ಹೂಮಾಲೆಯಿಂದ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ವಿವಿಧ ಪ್ರಮುಖ ಬೀದಿಗಳಲ್ಲಿ ಶ್ರದ್ಧಾಭಕ್ತಿಯಿಂದ ರಥೋತ್ಸವ ಸಂಚರಿಸಿತು. ಅದರಲ್ಲಿ ಪಾಲ್ಗೊಂಡ ಭಕ್ತ ಸಮೂಹ ಭಕ್ತಿಯಿಂದ ಜಯಘೋಷ ಹಾಕಿದರು. 

ರಥೋತ್ಸವ ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಭಕ್ತಾದಿಗಳು ಚಪ್ಪಾಳೆ ತಟ್ಟಿ ಭಕ್ತಿ ಬಾವ ಮರೆದರು. ಬಳಿಕ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಕಾಯಿ ಒಡೆಸಿ, ನೈವೇದ್ಯ ನೆರವೇರಿಸಿ ಕೃತಾರ್ಥರಾದರು.

ಇದಕ್ಕೂ ಮುನ್ನ ಬೆಳಗ್ಗೆ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ವೀರಭದ್ರೇಶ್ವರ, ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರಿಕ ಪೂಜೆ, ಅಗ್ನಿ ಪ್ರವೇಶ, ಧಾರ್ಮಿಕ ಕಾರ್ಯದಲ್ಲಿ ಭಕ್ತರು ಪಾಲ್ಗೊಂಡಿದ್ದರು. 

ಮಹಿಳೆಯರು ಹಾಗೂ ಮಕ್ಕಳು ಸಹ ಕೊಂಡ ಹಾಯ್ದರು. ಭಕ್ತರು ತಮ್ಮ ನಾಲಿಗೆ, ಕೆನ್ನೆ, ಕೈ ಭಾಗ ಸೇರಿದಂತೆ ದೇಹದ ವಿವಿಧ ಕಡೆಗಳಲ್ಲಿ ಶಸ್ತ್ರ ಚುಚ್ಚಿಕೊಂಡು ಭಕ್ತಿ ಪರಾಕಾಷ್ಠೆ ಮೆರೆದರು.

ಭಕ್ತಾಧಿಗಳು ವಿವಿಧ ರೀತಿಯಲ್ಲಿ ಹರಕೆ ತೀರಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅಗ್ನಿಕುಂಡವನ್ನು ಸಿದ್ಧಗೊಳಿಸಲಾಗಿತ್ತು. ಉದ್ಯೋಗ, ಸಂತಾನ, ಆಸ್ತಿ, ಸಂಪತ್ತು ಹಾಗೂ ಆರೋಗ್ಯ ಸೇರಿದಂತೆ ಹಲಾವಾರು ಇಷ್ಟಾರ್ಥಗಳನ್ನು ಈಡೇರಿಸುವಂತೆ ಕೆಂಡತುಂಬಿದ ಅಗ್ನಿ ಕುಂಡದಲ್ಲಿ ಭಕ್ತಿಯಿಂದ ಅಗ್ನಿ ಕುಂಡ ಹಾಯ್ದು ಭಕ್ತರು ಹರಕೆ ತೀರಿಸಿದರು.

ಇನ್ನು ಈ ಜಾತ್ರೆಗೆ ಹೂವಿನ ಹಡಗಲಿ, ಹರಪನಹಳ್ಳಿ, ಕೊಟ್ಟರು, ಕೂಡ್ಲಿಗಿ, ಅಕ್ಕಪಕ್ಕದ ಜಿಲ್ಲೆಯವರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ಕಳೆದ ಏಪ್ರಿಲ್ 29 ರಿಂದ ಮೇ 11 ರ ವರೆಗೂ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಸಮಿತಿಯಿಂದ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಬೆಳಿಗ್ಗೆ 10 ಗಂಟೆಗೆ ಗುಗ್ಗಳ ಹಾಗೂ ಅಗ್ನಿ ಮೇ. 11 ರಂದು‌ ಓಕಳಿ ಕಾರ್ಯಕ್ರಮ ನೆರವೇರಿಸಲಾಗುವುದು ಎಂದು ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *