ಚಿತ್ರದುರ್ಗ : ರಾತ್ರಿ ಸುರಿದ ಮಳೆ ಗಾಳಿಗೆ ಮಲ್ಲಾಪುರದಲ್ಲಿರುವ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆ, ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ಬಾಪೂಜಿ ಸಮನ್ವಯ ಪ್ರೌಢಶಾಲೆ ಕಟ್ಟಡದ ಮೇಲಿನ ಶೀಟ್ಗಳು ಕಬ್ಬಿಣದ ಹ್ಯಾಂಗ್ಲರ್ಗಳ ಸಮೇತ ಹಾರಿ ಬಿದ್ದಿರುವುದರಿಂದ ಸುಮಾರು ಏಳೆಂಟು ಮನೆಗಳು ಜಖಂಗೊಂಡಿವೆ.
ಮಲ್ಲಾಪುರ ಗ್ರಾಮದಿಂದ ಶಾಲೆ ಸ್ವಲ್ಪ ದೂರದಲ್ಲಿದ್ದರು ಹ್ಯಾಂಗ್ಲ್ರಗಳ ಸಮೇತ ಹಾರಿ ಮನೆಗಳ ಮೇಲೆ ಬಿದ್ದಿದೆಯೆಂದರೆ ಎಂತಹ ರಭಸದ ಮಳೆ ಗಾಳಿ ಬಂದಿರಬಹುದು ಎಂದು ಗ್ರಾಮಸ್ಥರು ಸೋಜಿಗಪಟ್ಟುಕೊಳ್ಳುತ್ತಿದ್ದಾರೆ.
ಎ.ಕೆ.ಕಾಲೋನಿಯಲ್ಲಿರುವ ಯಲ್ಲಪ್ಪನ ಮಗ ನಿತಿನ್ ತಲೆಗೆ ಗಾಯವಾಗಿದ್ದು, ಹೊಲಿಗೆ ಹಾಕಲಾಗಿದೆ. ಮಹಿಳೆ ಕೃಷ್ಣಮ್ಮಳ ತಲೆಗೂ ಪೆಟ್ಟಾಗಿ ಹೊಲಿಗೆ ಬಿದ್ದಿದೆ. ಸದಾನಂದಮೂರ್ತಿ ಎಂಬುವರ ಮನೆ ಮೇಲೆ ಶೀಟ್ ಬಿದ್ದಿದ್ದು, ಅಡುಗೆ ಮನೆ ಸೇರಿದಂತೆ ಇತರೆ ಕಡೆ ಹಾನಿಯಾಗಿದೆ. ಲೋಕೇಶ್ವರಯ್ಯ, ಲಲಿತಮ್ಮ, ನಾಗರಾಜಯ್ಯ, ಮೈಲಾರಪ್ಪ ಇವರ ಮನೆಗಳಿಗೂ ಹಾನಿಯಾಗಿದೆ. ದೊಡ್ಡ ಶೀಟ್ವೊಂದು ಖಾಲಿ ಜಾಗದಲ್ಲಿ ಬಿದ್ದಿರುವುದರಿಂದ ಯಾವುದೇ ಜೀವ ಹಾನಿಯಾಗಿಲ್ಲ. ರಾತ್ರಿ ವೇಳೆಯಾಗಿದ್ದರಿಂದ ಮಲಗಿದ್ದವರು ಶೀಟ್ಗಳು ಬಿದ್ದ ಶಬ್ದಕ್ಕೆ ಹೆದರಿ ಹೊರಗೆ ಓಡಿ ಹೋಗಿದ್ದಾರೆ.
ತಹಶೀಲ್ದಾರ್ ಡಾ.ನಾಗವೇಣಿ, ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ.