ಬೆಂಗಳೂರು, ಮೇ 12 : ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಆ ಮೂಲಕ ಸಿಲಿಕಾನ್ ಸಿಟಿಯಲ್ಲಿ ಹುಸಿ ಬಾಂಬ್ ಬೆದರಿಕೆ ಮೇಲ್ ಮುಂದುವರಿದಿದೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಾಗವಾರದ ಸೆಂಟ್ ಫಿಲೋಮಿನಾ ಸೇರಿದಂತೆ ನಾರಾಯಣ ಹೆಲ್ತ್ , ಸಾಗರ ಆಸ್ಪತ್ರೆ, ಸಮರ್ಥ, ಜೆಂಜೆ ಹಾಗೂ ವಿಮಲಾಲಯ್ಯ ಆಸ್ಪತ್ರೆಯ ಬಾಂಬ್ ಬೆದರಿಕೆಯ ಬಗ್ಗೆ ಈ ಮೇಲ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಬಾರಿ ನೇರವಾಗಿ ಬೆಂಗಳೂರು ಪೊಲೀಸರ ಇ-ಮೇಲ್ ಅಕೌಂಟ್‌ಗೆ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ಬೆದರಿಕೆ ಇ-ಮೇಲ್ ಹಿನ್ನೆಲೆ ಪೊಲೀಸರು ತಪಾಸಣೆ ನಡೆಸಿದ್ದು, ಈ ವೇಳೆ ಯಾವುದೇ ಸ್ಫೋಟಕ ವಸ್ತು ಇಲ್ಲ. ಹೀಗಾಗಿ ತಪಾಸಣೆ ನಂತರ ಹುಸಿ ಬಾಂಬ್ ಬೆದರಿಕೆ ಬಗ್ಗೆ ಪೊಲೀಸರು ದೃಢಪಡಿಸಿದ್ದಾರೆ.
ಇತ್ತೀಚೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಕೆಲವು ವಿಮಾನಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಬಾಂಬ್ ಬೆದರಿಕೆ ಬಂದಿತ್ತು. ಬಾಂಬ್ ಬೆದರಿಕೆ ಕಳಸಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ದೂರು ದಾಖಲಿಸಿದ್ದರು.
ಅಪರಿಚಿತ ಆರೋಪಿ ವಿರುದ್ಧ ಮೇ 2 ರಂದು ಬೆಂಗಳೂರು ರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಟರ್ಮಿನಲ್ ಮ್ಯಾನೇಜರ್ ಗೀತಾ ರಾಣಿ ಅವರು ತಮ್ಮ ದೂರಿನಲ್ಲಿ, ವಿಮಾನ ನಿಲ್ದಾಣದ ಪ್ರತಿಕ್ರಿಯೆ ಇಮೇಲ್ ಐಡಿಗೆ ಮೇಲ್ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಬಾಂಬ್‌ಗಳನ್ನು ಇಟ್ಟಿದ್ದು, ಅವು ಕೆಲವೇ ಗಂಟೆಗಳಲ್ಲಿ ಸ್ಫೋಟಗೊಳ್ಳುತ್ತವೆ. ಮೇಲ್ ಮಾಡಿದವನು ತಾನು ಭಯೋತ್ಪಾದಕ ಗುಂಪಿನಿಂದ ಬಂದವನು ಎಂದು ಹೇಳಿದ್ದಾನೆ ಎಂದು ಹೇಳಿದ್ದಾನೆ.