ಶಿವಮೊಗ್ಗ : ಪ್ರತಿ ಕ್ಷೇತ್ರಗಳಲ್ಲಿ ಪ್ರಗತಿ ಹೊಂದುತ್ತಿರುವ ಈ ಹೊತ್ತಿನಲ್ಲಿ ಮಾನವೀಯತೆಯ ಪ್ರಗತಿ ಆಗಬೇಕಿದ್ದು, ಅಂತಹ ಪ್ರಗತಿಗೆ ಬಸವಣ್ಣನವರ ವಚನಗಳು ಪ್ರೇರಣೆ ನೀಡಲಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿದರು.
ಕಸಾಪ ಕಛೇರಿಯ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬಸವೇಶ್ವರ ಜಯಂತಿ ಪ್ರಯುಕ್ತ ಬಸವಣ್ಣ ನವರ ಶ್ರಮ ಸಂಸ್ಕೃತಿ ಸಮ ಸಮಾಜ ಚಿಂತನೆ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಸಮಸಮಾಜ ನಿರ್ಮಾಣ ಸಂದೇಶವನ್ನು ಬಸವಣ್ಣನವರು ವಚನಗಳ ಮೂಲಕ ಪ್ರತಿಪಾದಿಸಿದ್ದರು. ಆದರೆ ಇವನಾರವ ಎನ್ನುವಾಗ ಇವ ನಮ್ಮವ ಎಂದು ಎಲ್ಲರನ್ನು ಸಮಾನವಾಗಿ ಕಾಣುವ ಕನಿಷ್ಠ ಸೌಜನ್ಯವನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ನಾವಿದ್ದೇವೆ. ಮಾನವೀಯತೆ ಪ್ರಗತಿಗಾಗಿ ಬಸವಣ್ಣನವರ ವಚನಗಳ ಆಶಯಗಳನ್ನು ಅರ್ಥೈಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
ಸಾಹಿತಿ ಎಚ್.ಟಿ.ಕೃಷ್ಣಮೂರ್ತಿ ಮಾತನಾಡಿ, ಇಂದು ಎಲ್ಲರ ಬಾಯಲ್ಲಿ ಬಸವಣ್ಣನವರ ವಚನಗಳ ಸಾಲು ಪ್ರತಿಧ್ವನಿಸುತ್ತದೆ. ಆದರೆ ಎಷ್ಟರ ಮಟ್ಟಿಗೆ ನಮ್ಮ ಬದುಕಿನಲ್ಲಿ ಆ ಸಾಲುಗಳು ಅನುಷ್ಠಾನಗೊಂಡಿದೆ ಎಂಬುದು ಚರ್ಚಿತ ವಿಚಾರ ಎಂದು ಹೇಳಿದರು.
ಸಾಂಸ್ಕೃತಿಕ ನಾಯಕರಾದ ಬಸವಣ್ಣನವರು ಕೆಲವು ಮಾನ್ಯಗಳಿಗೆ ಮಾತ್ರ ಸೀಮಿತ ವಾಗಿದ್ದಾರೆ. ನಿರಂತರ ಹೋರಾಟದ ನಂತರವೂ ತುಳಿಯುವ, ತುಳಿಸಿಕೊಳ್ಳುವ ಪದ್ಧತಿಗಳು ಇಂದಿಗೂ ಉಸಿರಾಡುತ್ತಿವೆ. ಮನುಷ್ಯ ಚೈತನ್ಯ ವನ್ನು ಕುಗ್ಗಿಸುವಲ್ಲಿ ಜಾತಿ ವ್ಯವಸ್ಥೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇಂದಿಗೂ ಸಮಸಮಾಜದ ಅನಿವಾರ್ಯತೆ ಗಳನ್ನು ಚರ್ಚೆ ಮಾಡುವ ಅವಶ್ಯಕತೆ ಮೂಡುತ್ತಿರು ವುದು ವಿಷಾದನೀಯ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎಂ.ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು.ಡಿ.ಗಣೇಶ್, ಎಂ.ಎಂ.ಸ್ವಾಮಿ, ಕೆ.ಎಸ್.ಅನುರಾಧ ಸೇರಿ ಮತ್ತಿತರರು ಉಪಸ್ಥಿತರಿದ್ದರು. ಪದಾಧಿಕಾರಿಗಳಾದ ಬಿ.ಟಿ.ಅಂಬಿಕಾ ಹಾಗೂ ನಳಿನಾಕ್ಷಿ ಬಸವಣ್ಣನವರ ವಚನಗಳನ್ನು ಹಾಡಿದರು. ಉಪನ್ಯಾಸಕಿ ಸುಜಾತಾ ನಿರೂಪಿಸಿದರು.