Breaking
Tue. Dec 24th, 2024

ಮಕ್ಕಳಲ್ಲಿ ಮಾನಸಿಕ‌ ವೇದನೆ‌ ಸೃಷ್ಟಿಸಿದ ಸರ್ಕಾರ ಇಂದು 1.79 ಲಕ್ಷ ಮಕ್ಕಳಿಗೆ ಕೃಪಾಂಕ ನೀಡಿ ಪಾಸು…!

ಬೆಂಗಳೂರು, ಮೇ 12 : ಪರೀಕ್ಷಾ ಅಕ್ರಮ ತಡೆಯಲು ವೆಬ್ ಕಾಸ್ಟ್ ನಿರ್ವಹಣೆ ಮಾಡಿ ಮಕ್ಕಳಲ್ಲಿ ಮಾನಸಿಕ‌ ವೇದನೆ‌ ಸೃಷ್ಟಿಸಿದ ಸರ್ಕಾರ ಇಂದು 1.79 ಲಕ್ಷ ಮಕ್ಕಳಿಗೆ ಕೃಪಾಂಕ ನೀಡಿ ಪಾಸು ಮಾಡಿರುವುದು ವ್ಯವಸ್ಥೆಯ ಕ್ರೂರ ಅಣಕ‌ ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್  ಕಿಡಿಕಾರಿದ್ದಾರೆ.

ಈ ಕುರಿತಾಗಿ ಸಿಎಂ ಸಿದ್ದರಾಮಯ್ಯಗೆ  ಪತ್ರ ಬರೆಯಲಾಗಿದ್ದು, ಪರೀಕ್ಷಾ ಕೇಂದ್ರಿತ‌ ವ್ಯವಸ್ಥೆಗಿಂತಲೂ ಬೋಧನಾ ವ್ಯವಸ್ಥೆಯನ್ನು ಬಲಪಡಿಸುವುದು ಮುಖ್ಯ. ಯಾವುದೇ ವ್ಯವಸ್ಥೆಗಳು ಅಂತಿಮವಾಗಿ‌ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ, ಸಮಗ್ರ ಕಲಿಕೆಗೆ ಪ್ರೇರೇಪಿಸುವಂತಹವುಗಳಾಗಿರಬೇಕೇ ಹೊರತು ಮಕ್ಕಳ ಸ್ಥೈರ್ಯ‌ ಕಸಿಯುವಂತಹದ್ದಾಗಿರಬಾರದು ಈ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿ ಎಂದು‌ ಮನವಿ ಮಾಡಿದ್ದಾರೆ.

2024ರ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶಗಳು, ನಮ್ಮ ಆಡಳಿತ ವ್ಯವಸ್ಥೆಯ‌ ಲೋಪದೋಷಗಳನ್ನಷ್ಟೇ ಅಲ್ಲ, ನೀತಿ ನಿರೂಪಕರುಗಳ ಜವಾಬ್ದಾರಿರಾಹಿತ್ಯವನ್ನು ಕೂಡ ಸಮರ್ಪಕವಾಗಿಯೇ ಬಯಲು ಮಾಡಿದೆ. ವಿದ್ಯಾರ್ಥಿಗಳ ಮಾನಸಿಕ ಪರಿಸ್ಥಿತಿಗಳನ್ನು ಒಂದು ಚೂರೂ ಗಮನಿಸದೇ, ಪರೀಕ್ಷೆಗಳನ್ನು ಶಿಸ್ತುಬದ್ಧವಾಗಿ ನಿರ್ವಹಿಸುತ್ತೇವೆಂದು ಘೋಷಿಸಿಕೊಳ್ಳುವುದು, ಮಕ್ಕಳನ್ನು ಸಿಸಿಟಿವಿಗಳ ಕಣ್ಗಾವಳೊಳಗೆ ಇರಿಸಿ ಭಯೋತ್ಪಾದನೆ ಮಾಡುವುದು, ನಂತರ ಕೃಪಾಂಕಗಳನ್ನು ನೀಡಿ ಫಲಿತಾಂಶ ಹೆಚ್ಚಿಸುವುದು ನನಗಂತೂ ಇಂದಿನ ವ್ಯವಸ್ಥೆಯ ಕ್ರೂರ‌ ಅಣಕವಾಗಿ ಕಂಡಿದೆ.

ಕಳೆದ ಸಾಲಿನ ಪರೀಕ್ಷೆಗಳಿಗೆ ಹೋಲಿಸಿದರೆ ಶೇ.83 ರಿಂದ ಈ ಬಾರಿ‌ ಶೇ 53ಕ್ಕೆ ಅಂದರೆ ಶೇ.30 ರಷ್ಟು ಫಲಿತಾಂಶ ಕುಸಿತ ಕಂಡಿದೆ. ನಂತರ ಕೇವಲ ಕೃಪಾಂಕದ ಕಾರಣವೇ 1.79 ಲಕ್ಷ ವಿದ್ಯಾರ್ಥಿಗಳು ಪಾಸಾಗಿ ನಿಟ್ಟುಸಿರು ಬಿಟ್ಟಿದ್ದಾರೆ ಎಂದರೆ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಬಹುದು. ಇದು ಶೇರು‌ ಮಾರುಕಟ್ಟೆಯ ಮಾದರಿಯಲ್ಲಿ ಏರಿಳಿತ ಎಂದು ಆಲೋಚಿಸಿಕೊಂಡು ಸುಮ್ಮನಿರುವ ವಿಷಯವಲ್ಲ.

ಒಂದಿಡೀ ಪೀಳಿಗೆಯ ಮನೋಸ್ಥೈರ್ಯವನ್ನು ಕಂಗೆಡಿಸುವ ವಿಷಯ ಇದಾಗಿದೆ. ಪರೀಕ್ಷೆ ಆನೂಚಾನವಾಗಿ ನಡೆದುಬಂದ ಒಂದು ವ್ಯವಸ್ಥೆಯನ್ನು ಬದಲಾಯಿಸುವಾಗ ಸಮಗ್ರ ಆಲೋಚನೆ ಎಷ್ಟು ಮುಖ್ಯವಾಗುತ್ತದೆ ಎನ್ನುವುದನ್ನು ಸರ್ಕಾರ ಆಲೋಚನೆ ಮಾಡಬೇಕಿತ್ತು ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ.‌ ಇದೆಲ್ಲವನ್ನೂ ಗಮನಿಸಿದ ಬಳಿಕ ಇಷ್ಟು ದಿನ ಸರ್ಕಾರಗಳು ಕೇವಲ ಜನರನ್ನು ಸುಳ್ಳೇ ನಂಬಿಸುವ ಕೆಲಸ ಮಾಡುತ್ತಿದ್ದವೇ ಎನ್ನುವ ಅನುಮಾನ ಬಾರದಿರಲು ಸಾಧ್ಯವಿಲ್ಲ. ಈ ಕುರಿತು ನನ್ನ ಕೆಲ ಅಭಿಪ್ರಾಯಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ.

ಪರೀಕ್ಷೆಯ ಅಕ್ರಮಗಳನ್ನು ತಡೆಯುವಲ್ಲಿ‌ ಮೌಲ್ಯ ನಿರ್ಣಯ ಮಂಡಳಿ ಪರೀಕ್ಷಾ ಪ್ರಕ್ರಿಯೆಯನ್ನು ವೆಬ್ ಕಾಸ್ಟ್ ಮಾಡಲು ನಿರ್ಣಯಿಸಿತು. ಅದಕ್ಕೆ ಮುನ್ನ ನಮ್ಮ ವಿದ್ಯಾರ್ಥಿಗಳಿಗೆ ನೀಡಲಾದ‌ ಶಿಕ್ಷಣದ ಗುಣಮಟ್ಟ, ಅವರ ಕಲಿಕಾ ಸಿದ್ಧತೆಯ ಕುರಿತಂತೆ ಸಕ್ರಿಯ ಚರ್ಚೆಯ ಅವಶ್ಯಕತೆ‌ ಇತ್ತು.

ನಾನು ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಗುಣಾತ್ಮಕ ಶಿಕ್ಷಣದ‌ ಕಡೆಗೆ‌ ನಮ್ಮ ನಡಿಗೆ ಎನ್ನುವ ವಿಶಿಷ್ಟ ಪ್ರಯೋಗ ಮಾಡಿದ್ದೆ. ಕ್ಲಸ್ಟರ್ ಹಂತದಿಂದ ರಾಜ್ಯ ಹಂತದವರೆಗೆ ಬೋಧನಾ ಪ್ರಕ್ರಿಯೆಯ ನಿರಂತರ ಅನುಪಾಲನೆಗೆ ಸ್ವಯಂಸಮರ್ಥನೀಯ ವ್ಯವಸ್ಥೆಯನ್ನು‌ ಜಾರಿಯಲ್ಲಿಡುವುದು ನಮ್ಮ‌ ಉದ್ದೇಶವಾಗಿತ್ತು.‌ ಈಗ ಅದನ್ನು ಇಲಾಖಾಧಿಕಾರಿಗಳು ಜಾರಿಯಲ್ಲಿಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ.‌ ಆದರೆ ಅದರ ಅನುಷ್ಠಾನಕ್ಕೆ ಮಾತ್ರ ವಿಶೇಷ ಪರಿಶ್ರಮ, ರಾಜಕೀಯ ಇಚ್ಛಾಶಕ್ತಿಯ ಅವಶ್ಯಕತೆ ಇತ್ತು.

ಅದೇ ರೀತಿ‌ ಕೋವಿಡ್ ಸಂಕಷ್ಟದಲ್ಲಿಯೂ ಶಾಲಾ ಶಿಕ್ಷಣ ಇಲಾಖೆ ಬೋಧನೆಗೆ ಮಹತ್ವ ನೀಡುವ ಕೆಲಸ ಮಾಡುವ ಹಾಗೆ ವಿದ್ಯಾಗಮ ಎನ್ನುವ ಪ್ರಯತ್ನವನ್ನೂ ಜಾರಿಯಲ್ಲಿಟ್ಟಿದ್ದೆವು. ಅದು ತನ್ನ ವಿಭಿನ್ನ ಪ್ರಯೋಗಶೀಲತೆಯ ಕಾರಣ ದೇಶದ ಗಮನ ಸೆಳೆದಿತ್ತು.

ನಂತರ ಬಂದ ಕಲಿಕಾ ಚೇತರಿಕೆಯೂ ಕೂಡಾ‌ ಕಲಿಕೆಗೆ ಪ್ರಾಧಾನ್ಯತೆಯನ್ನು ನೀಡುವ ಯತ್ನವಾಗಿತ್ತೇ ಹೊರತು, ವಿದ್ಯಾರ್ಥಿಗಳನ್ನು ಮಾನಸಿಕ ಹಿಂಸೆಗೆ ದೂಡುವ ಕ್ರಮವಾಗಿರಲಿಲ್ಲ.

ಅಂದರೆ ಯಾವುದೇ ವ್ಯವಸ್ಥೆಗಳು ಅಂತಿಮವಾಗಿ‌ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ, ಸಮಗ್ರ ಕಲಿಕೆಗೆ ಪ್ರೇರೇಪಿಸುವಂತಹವುಗಳಾಗಿರಬೇಕೇ ಹೊರತು ಮಕ್ಕಳ ಸ್ಥೈರ್ಯ‌ ಕಸಿಯುವಂತಹದ್ದಾಗಿರಬಾರದು.

ವಿಶ್ವಾದ್ಯಂತ ಪರೀಕ್ಷಾ ಕೇಂದ್ರಿತ‌ ವ್ಯವಸ್ಥೆಗಳು ದೂರಾಗುತ್ತಿವೆ. ಮಕ್ಕಳ ಕಲಿಕೆಯ ಮಾನದಂಡ ಕೇವಲ ಪರೀಕ್ಷೆಯಲ್ಲ ಎನ್ನುವುದೂ ವೈಜ್ಞಾನಿಕವಾಗಿ ಅರ್ಥವಾಗುತ್ತಿದೆ.‌

ತಮ್ಮ‌ ಸರ್ಕಾರ‌ ಈ ಕುರಿತಂತೆ ಇನ್ನಷ್ಟು ವಸ್ತುನಿಷ್ಠವಾಗಿ ಆಲೋಚಿಸಬೇಕಿದೆ.‌ ವಿಭಿನ್ನತೆಯ‌ ನೆಪದಲ್ಲಿ ಪರೀಕ್ಷೆಯ ಹಿಂಸೆಯನ್ನು ಮಕ್ಕಳ ಮೇಲೆ ಹೇರುವ ಮುನ್ನ, ನಂತರ ಕೃಪಾಂಕಗಳನ್ನು ನೀಡಿ ಎಡವಟ್ಟು ಮಾಡುವ, ವಿಶ್ವಾಸ ಕದಡುವ ಮುನ್ನ ಬೋಧನಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ‌ ಶ್ರಮ ವಹಿಸಬೇಕಿದೆ. ತಮ್ಮ‌ ಹಕ್ಕನ್ನು ಪಡೆಯಲು ಯಾವ ಸಮೂಹ ಶಕ್ತಿಯನ್ನೂ ಹೊಂದದ ಆ ವಿದ್ಯಾರ್ಥಿಗಳ ಕುರಿತಂತೆ ಸಹಾನುಭೂತಿಯ ನಿಲುವು ಮುಖ್ಯ. ಈ ಕುರಿತಂತೆ ಸಂಬಂಧಪಟ್ಟವರಿಗೆ ನಿಮ್ಮಿಂದ ಸೂಕ್ತ ಹಾಗೂ ಕಠಿಣ ನಿರ್ದೇಶನ ತಲುಪಿದಲ್ಲಿ‌ ಒಂದಷ್ಟು ಬದಲಾವಣೆ ಸಾಧ್ಯ ಎಂದಿದ್ದಾರೆ.

Related Post

Leave a Reply

Your email address will not be published. Required fields are marked *