ಮಂಡ್ಯ : ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ರೈಲಿನ ಮುಂಭಾಗಕ್ಕೆ ಮರದ ಕೊಂಬೆಯೊಂದು ಬಿದ್ದ ಪರಿಣಾಮ ಗಾಜು ಒಡೆದು ರೈಲಿನ ಚಾಲಕ (ಲೋಕೋ ಪೈಲೆಟ್) ಗಾಯಗೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ರೈಲು ಚಾಲಕ ಪ್ರಸಾದ್ (39) ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಮೇಲೆ ತೆರಳಿದ್ದಾರೆ. ಬೇರೆ ಲೋಕೋ ಪೈಲೆಟ್ ಬಂದು ರೈಲನ್ನು ಮುನ್ನಡೆಸಬೇಕಿರುವುದರಿಂದ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ರೈಲು ಮಂಡ್ಯ ನಿಲ್ದಾಣದಲ್ಲಿ ನಿಂತಿತ್ತು. ರೈಲಿನಲ್ಲಿದ್ದ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿದ ಬೇರೆ ರೈಲುಗಳ ಮೂಲಕ ಪ್ರಯಾಣವನ್ನು ಮುಂದುವರಿಸಿದರು.
ಬೆಂಗಳೂರಿನಿಂದ ಮೈಸೂರು ಕಡೆಗೆ ಸೋಮವಾರ ಸಂಜೆ 6.20ರ ಸಮಯದಲ್ಲಿ ಮೆಮೊರೈಲು, ಸಂಚರಿಸುತ್ತಿತ್ತು. ರೈಲು ಮಂಡ್ಯ ಸಕ್ಕರೆ ವೃತ್ತದ ಮಾರ್ಗವಾಗಿ ಸಂಚರಿಸುವ ವೇಳೆ ಗಾಳಿ ಸಹಿತ ಜೋರು ಮಳೆಯಾಗುತ್ತಿದ್ದರಿಂದ ಮರದ ಕೊಂಬೆಯೊಂದು ಮುರಿದು ರೈಲಿನ ಮುಂಭಾಗಕ್ಕೆ ಬಡಿದಿದೆ. ಪರಿಣಾಮ ಮುಂಭಾಗದ ಗಾಜು ಜಖಂಗೊಂಡು ಕ್ಯಾಬಿನ್ ಒಳಗಿದ್ದ ಚಾಲಕ ಪ್ರಸಾದ್ ಗಾಯಗೊಂಡರು. ಇದರ ನಡುವೆಯೂ ಚಾಲಕ ಸುರಕ್ಷಿತವಾಗಿ ರೈಲನ್ನು ನಿಲ್ದಾಣಕ್ಕೆ ತಂದು ನಿಲ್ಲಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ : ವಿಷಯ ತಿಳಿದ ಸ್ಥಳೀಯ ರೈಲ್ವೆ ಅಧಿಕಾರಿಗಳು ಮತ್ತು ರೈಲ್ವೆ ಪೊಲೀಸರು ಗಾಯಗೊಂಡಿದ್ದ ಚಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವುದಕ್ಕೆ ನೆರವಾದರು. ಗಾಯಾಳು ಚಾಲಕನಿಗೆ ಚಿಕಿತ್ಸೆ ನೀಡಿದ ವೈದ್ಯರು ಆತನಿಗೆ ವಿಶ್ರಾಂತಿ ನೀಡುವಂತೆ ಸಲಹೆ ನೀಡಿದರು. ಬಳಿಕ ಆತನನ್ನು ಬೆಂಗಳೂರಿಗೆ ಕಳಿಸಿಕೊಡಲಾಯಿತು.
ಮಂಡ್ಯ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲನ್ನು ಮುನ್ನಡೆಸಲು ಬೇರೆ ಲೋಕ ಪೈಲೆಟ್ ಆಗಮಿಸಬೇಕಾಗಿದ್ದರಿಂದ ರೈಲು ನಿಲ್ದಾಣದಲ್ಲಿ ಉಳಿಯುವಂತಾಯಿತು. ರೈಲಿನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬೇರೆ ರೈಲುಗಳಲ್ಲಿ ಮೈಸೂರಿಗೆ ಕಳುಹಿಸಿಕೊಡಲಾಯಿತು. ಇದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಉಂಟಾಗಲಿಲ್ಲ.
ಸುಮಾರು 3 ಗಂಟೆಗೂ ಹೆಚ್ಚು ಕಾಲದಿಂದ ಮಂಡ್ಯ ನಿಲ್ದಾಣದಲ್ಲೇ ನಿಂತಿದ್ದ ರೈಲನ್ನು ಬೇರೆ ಲೋಕೋ ಪೈಲೆಟ್ ಆಗಮಿಸಿ ರೈಲನ್ನು ಬೆಂಗಳೂರಿಗೆ ಮುನ್ನಡೆಸಿದರು. ಬೆಂಗಳೂರಿನಲ್ಲಿ ರೈಲಿನ ಗಾಜು ಹಾಗೂ ಜಖಂ ಗೊಂಡಿರುವ ಭಾಗಗಳನ್ನು ದುರಸ್ತಿ ಪಡಿಸಲಾಗುವುದು ಎಂದು ಸ್ಥಳೀಯ ರೈಲ್ವೆ ಅಧಿಕಾರಿಗಳು ತಿಳಿಸಿದರು.