ಧಾರವಾಡ ಮೇ.14 : ಜಿಲ್ಲೆಯಾದ್ಯಂತ 8 ಸಾವಿರ ಎಕರೆ ಮಾವು ಬೆಳೆಯನ್ನು ಬೆಳೆಯಲಾಗುತ್ತಿದ್ದು, ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಕೆಗೆ ಉತ್ತಮ ಗುಣಮಟ್ಟದ ಮಾವು ನೀಡಬೇಕೆನ್ನುವ ಉದ್ದೇಶದಿಂದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಾಶಿನಾಥ ಬದ್ರಣ್ಣನವರು ಹೇಳಿದರು.
ಜಿಲ್ಲೆಯ ವಿವಿಧ ಭಾಗದ ರೈತರು ಮಾವು ಮಾರಾಟ ಮೇಳದಲ್ಲಿ ಸುಮಾರು 30 ಮಳಿಗೆಗಳನ್ನು ಹಾಕಿದ್ದಾರೆ. ಅದರಲ್ಲಿ ಆರ್ಕಾ ಕೇಸರಿ, ಧಾರವಾಡ ರಸಪೂರಿ, ಖಾದರ್, ಕಲ್ಮಿ ಸೇರಿದಂತೆ ವಿವಿಧ ರೀತಿಯ ಮಾವಿನ ತಳಿಗಳನ್ನು ಮಾರಾಟ ಮಾಡಲಾಗುತ್ತಿದೆ. ಸುಮಾರು 52 ವಿವಿಧ ಮಾವಿನ ತಳಿಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದ್ದು, 20 ರಿಂದ 30 ಟನ್ ಮಾವು ಮಾರಾಟವಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಧಾರವಾಡ ಜಿಲ್ಲೆಯ ಕೆಲಗೇರಿ ಗ್ರಾಮದ ಮಾವು ಬೆಳೆಗಾರ ಪ್ರಮೋದ ಗಾವ್ಕರ ಅವರು ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ, ಮಾತನಾಡಿ, 2-3 ವರ್ಷಗಳಿಂದ ಮಾವು ಮೇಳವನ್ನು ಮಾಡಿಲ್ಲ ಆದರೆ ಈ ವರ್ಷ ಮಾವು ಮೇಳ ಆಯೋಜಿಸಿರುವುದರಿಂದ ಬಹಳಷ್ಟು ಖುಷಿಯಾಗಿದೆ. ಪ್ರತಿ ವರ್ಷ ಮೇಳವನ್ನು ಆಯೋಜನೆ ಮಾಡಬೇಕು. ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯನ್ನು ತೊರಿಸುತ್ತಾರೆ ಮತ್ತು ನಮ್ಮ ಸಮಸ್ಯೆಗಳಿಗೆ ಸ್ಪಂಧಿಸುತ್ತಾರೆ ಎಂದು ಅವರು ಹೇಳಿದರು.
ಮಾವಿನ ತಳಿಗಳಲ್ಲಿಯೇ ಅತೀ ದುಬಾರಿಯಾಗಿರುವ ಮೀಯಾಝಾಕಿ ಎಂಬ ಜಪಾನ್ ತಳಿಯನ್ನು ಬೆಳೆಯುತ್ತಿದ್ದಾರೆ. ಈ ಮಾವಿನ ಹಣ್ಣಿನ ಪ್ರತಿ ಕೆಜಿಗೆ ಸುಮಾರು 2.7ಲಕ್ಷ ರೂ.ಗಳು ಆಗಿದ್ದು, ಒಂದು ಹಣ್ಣನ್ನು 10 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗಿದೆ ಎಂದು ಮಾವು ಬೆಳೆಗಾರ ಪ್ರಮೋದ ಗಾವ್ಕರ ಅವರು ಹೇಳಿದರು.
ಜಪಾನ ತಾಳಿಯಾದ ಮಿಯಾಝಾಕಿಯನ್ನು ಮಹಾರಾಷ್ಟ್ರದ ರತ್ನಗಿರಿಯಿಂದ ತಂದಿರುವುದಾಗಿ ತಿಳಿಸಿದರು ಹಾಗೂ ಸುಮಾರು 7 ಸಾವಿರಕ್ಕೂ ಹೆಚ್ಚು ಮಾವಿನ ಗಿಡಗಳನ್ನು ಬೆಳೆಸುತ್ತಿದ್ದು ಅದರಲ್ಲಿ ಈ ಮಿಯಾಝಾಕಿ ಸೇರಿದಂತೆ ವಿವಿಧ ಮಾವಿನ ತಳಿಗಳನ್ನು ಬೆಳೆಯುತಿದ್ದೇನೆ ಎಂದರು.
ಜೋಗೆಲ್ಲಾಪುರದ ಮಾವು ಬೆಳಗಾರರಾದ ರಾಮನಗೌಡ ಪಾಟೀಲ್ ಮಾತನಾಡಿ, ಸುಮಾರು ಹತ್ತು ವರ್ಷದಿಂದ ಈ ಮಾವು ಮೇಳದಲ್ಲಿ ಮಳಿಗೆ ಹಾಕುತ್ತಿದ್ದೇನೆ. ಕಲ್ಮಿ, ಅಪಸ್ ಹಾಗೂ ಸುಂದರ ಶಾಂತ ಮಾವಿನ ತಳಿಗಳನ್ನು ಮಾರಾಟಕ್ಕೆ ತಂದಿದ್ದೇನೆ. 3-4 ವರ್ಷಗಳಿಂದ ಇಳುವರಿ ಕಡಿಮೆಯಾಗಿದೆ. ಈ ಬಾರಿ 1.5 ಟನ್ ಮಾರಾಟ ಮಾಡುವ ನೀರೀಕ್ಷೆಯನ್ನು ಇಟ್ಟುಕೊಂಡು ಮಾವು ಮಾರಾಟ ಮೇಳದಲ್ಲಿ ಮಳಿಗೆಯನ್ನು ಹಾಕಿದ್ದೇನೆ ಎಂದು ಅವರು ಹೇಳಿದರು.
ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಇಮ್‍ತಾಜ್ ಚಂದಾಪುರ, ಇಲಾಖೆಯ ವಿವಿಧ ಅಧಿಕಾರಿಗಳು, ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.