ಮಾಲೆ : ಭಾರತದೊಂದಿಗೆ ಕಿತ್ತಾಟ ನಡೆಸಿ ಚೀನಾಗೆ ಹತ್ತಿರವಾಗಿರುವ ಮಾಲ್ಡೀವ್ಸ್ ಈಗ ಸಾಲದ ಸುಳಿಯಲ್ಲಿ ಸಿಲುಕಿದೆ. ಈಗ ಚೀನಾದಿಂದ ಮತ್ತಷ್ಟು ಸಾಲ ಪಡೆಯಲು ಮುಂದಾಗಿರುವ ಮಾಲ್ಡೀವ್ಸ್‌ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಸಾಲದ ಸುಳಿಯಲ್ಲಿ ಸಿಲುಕಿರುವ ಮಾಲ್ಡೀವ್ಸ್ ಆರ್ಥಿಕತೆ ಕುಸಿಯುವ ಲಕ್ಷಣಗಳು ಕಾಣಿಸುತ್ತಿವೆ. ಸಾಲದ ಜೊತೆಗೆ ಆದಾಯ ವೃದ್ಧಿಸುವ ಯಾವುದೇ ಯೋಜನೆಗಳನ್ನು ಸರ್ಕಾರ ಕೈಗೊಂಡಿಲ್ಲ. ಹೀಗಾಗಿ ರಾಷ್ಟ್ರದ ಪ್ರಮುಖ ಆದಾಯದ ಮೂಲವಾಗಿರುವ ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಯೋಜನೆಗಳನ್ನು ಕೂಡಲೇ ರೂಪಿಸಬೇಕು ಎಂದು ಐಎಂಎಫ್ ಹೇಳಿದೆ.
ಕಳೆದ ವರ್ಷ ಅಂತ್ಯಕ್ಕೆ ಮಾಲ್ಡೀವ್ಸ್ ವಿದೇಶಗಳಿಂದ 4.038 ಬಿಲಿಯನ್ ಡಾಲರ್ (ಅಂದಾಜು 33.71 ಸಾವಿರ ಕೋಟಿ ರೂ.) ಸಾಲ ಪಡೆದಿದೆ. ಇದು ಮಾಲ್ಡೀವ್ಸ್ ಜಿಡಿಪಿಗಿಂತ 118%ರಷ್ಟು ಹೆಚ್ಚಿದೆ. ಈ ಪೈಕಿ 25% ರಷ್ಟು ಸಾಲವನ್ನು ಚೀನಾದ ಎಕ್ಸ್‌ಪೋರ್ಟ್-ಇಂಪೋರ್ಟ್ ಬ್ಯಾಂಕ್‌ನಿಂದಲೇ ಪಡೆದಿದೆ.
ಭಾರತ ವಿರೋಧಿಯಾಗಿರುವ ಮೊಹಮ್ಮದ್ ಮುಯಿಜು ಅಧ್ಯಕ್ಷರಾದ ಬಳಿಕ ಚೀನಾಗೆ ಭೇಟಿ ನೀಡಿ ಸಹಾಯ ಪಡೆದ್ದರು. ಚುನಾವಣಾ ಪ್ರಚಾರದಲ್ಲಿ ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೈನಿಕರನ್ನು ಹೊರ ಹಾಕುವುದಾಗಿ ಘೋಷಿಸಿದ್ದರು. ಅದರಂತೆ ಭಾರತದ ಸೈನಿಕರು ಈಗ ಮಾಲ್ಡೀವ್ಸ್ ತೊರೆದಿದ್ದು ಚೀನಾ ಈಗ ರಕ್ಷಣಾ ಸಹಾಯ ಒದಗಿಸುವುದಾಗಿ ಹೇಳಿದೆ. ಚೀನಾದಿಂದ ಭಾರೀ ಹೂಡಿಕೆ
ಮಾಲ್ಡೀವ್ಸ್‌ನ ಐದಕ್ಕೂ ಹೆಚ್ಚು ದ್ವೀಪಗಳನ್ನು ಚೀನಾದ ಕಂಪನಿಗಳು 50 ವರ್ಷಗಳಿಗೆ ಗುತ್ತಿಗೆ ಪಡೆದಿವೆ. ಮಾಲೆ ಸಮುದ್ರ ಸೇತುವೆ ಅಭಿವೃದ್ಧಿ ಯೋಜನೆಯ ವೆಚ್ಚದ 50% ರಷ್ಟು ಹಣವನ್ನು ಚೀನಾವೇ ಭರಿಸಿದೆ. ಅಷ್ಟೇ ಅಲ್ಲದೇ 50% ರಷ್ಟು ವೆಚ್ಚವನ್ನು ಸಾಲದ ರೂಪದಲ್ಲಿ ನೀಡಿದೆ.
ಚೀನಾ -ಮಾಲ್ಡೀವ್ಸ್ ಸ್ನೇಹ ಸೇತುವೆ, ವಿಮಾನ ನಿಲ್ದಾಣ ನವೀಕರಣ, ಮನೆಗಳ ನಿರ್ಮಾಣ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳಿಗೆ ಚೀನಾ ಸರ್ಕಾರ ಬಿಲಿಯನ್‌ಗಟ್ಟಲೇ ಡಾಲರ್ ಹಣವನ್ನು ಹೂಡಿಕೆ ಮಾಡಿದೆ. ಮಾಲ್ಡೀವ್ಸ್ ಮತ್ತು ಚೀನಾದ ಸಂಬಂಧ ಈಗ ಆರಂಭವಾಗಿದ್ದಲ್ಲ. 1975 ರಿಂದಲೇ ಚೀನಾ ಮಾಲ್ಡೀವ್ಸ್‌ನಲ್ಲಿ ಹೂಡಿಕೆ ಮಾಡಲು ಆರಂಭಿಸಿತ್ತು.
ಏನಿದು ಚೀನಾದ ಕುತಂತ್ರ?
ವ್ಯಾಪಾರ ಮಾರುಕಟ್ಟೆಯನ್ನು ವಿಸ್ತರಿಸುವ ನೆಪದಲ್ಲಿ ಆರಂಭಿಸಿರುವ ಒನ್ ಬೆಲ್ಟ್ ಒನ್ ರೋಡ್ ಯೋಜನೆ ಮೂಲಕ ಚೀನಾ ಇಡೀ ವಿಶ್ವವನ್ನೇ ಆಳಲು ಹೊರಟಿದೆ. ಈ ಯೋಜನೆಗೆ ಈಗ 10 ವರ್ಷ ಪೂರ್ಣಗೊಂಡಿದೆ. ಸರಳವಾಗಿ ಹೇಳುವುದಾರೆ ರಸ್ತೆ, ರೈಲು, ಹಡಗಿನ ಮೂಲಕ ವಸ್ತುಗಳನ್ನು ಸಾಗಿಸಲು ಆರಂಭವಾದ ಯೋಜನೆ ಇದು. ರಷ್ಯಾ, ಸೌದಿ ಅರೇಬಿಯಾ, ಕತಾರ್, ಇರಾನ್, ಅರ್ಜೈಂಟಿನಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಸೇರಿದಂತೆ ಬರೋಬ್ಬರಿ 150 ದೇಶಗಳು ಈ ಯೋಜನೆಗೆ ಸಹಿ ಹಾಕಿದೆ.
ಯೋಜನೆಯನ್ನು ಸರಳವಾಗಿ ವಿವರಿಸುವುದಾರೆ ಹಿಂದುಳಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಚೀನಾ ಭಾರೀ ದೊಡ್ಡ ಮೊತ್ತದ ಯೋಜನೆಯನ್ನು ಕೈಗೊಳ್ಳುತ್ತದೆ. ಈ ಯೋಜನೆಗೆ ಅರ್ಧದಷ್ಟು ಹಣವನ್ನು ಚೀನಾ ಹೂಡಿಕೆ ಮಾಡಿದರೆ ಉಳಿದ ಅರ್ಧ ಹಣವನ್ನು ಆ ದೇಶಗಳು ಹೂಡಿಕೆ ಮಾಡಬೇಕು. ಆ ದೇಶಗಳಿಗೆ ಹಣ ಹೂಡಿಕೆ ಮಾಡಲು ಶಕ್ತಿ ಇಲ್ಲದ ಕಾರಣ ಚೀನಾದ ಬ್ಯಾಂಕ್‌ಗಳೇ ದೇಶಗಳಿಗೆ ಸಾಲ ನೀಡುತ್ತದೆ. ಸಾಲ ಪಾವತಿ ಆಗದೇ ಇದ್ದಾಗ ಯೋಜನೆಯನ್ನೇ ಚೀನಾ ಸಂಪೂರ್ಣ ಸ್ವಾಧೀನಪಡಿಸಿಕೊಳ್ಳುತ್ತದೆ.
ಚೀನಾ -ಪಾಕಿಸ್ತಾನ ಎಕಾನಮಿಕ್ ಕಾರಿಡಾರ್ ಹೆಸರಿನಲ್ಲಿ ಪಾಕ್ ಸಾಲ ಪಡೆದುಕೊಂಡಿತ್ತು ಸದ್ಯ ಅಂದಾಜು 30 ಬಿಲಿಯನ್ ಡಾಲರ್ ಹಣವನ್ನು ಪಾಕಿಸ್ತಾನ ಚೀನಾಗೆ ಪಾವತಿ ಮಾಡಬೇಕಿದೆ. ಚೀನಾ ಹಣವನ್ನು ಪಾವತಿ ಮಾಡಲು ಕನಿಷ್ಟ 40 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಶ್ರೀಲಂಕಾದ ಹಂಬನ್‌ತೋಟ ಬಂದರನ್ನು ಚೀನಾ ಸಹಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ. ಅಭಿವೃದ್ಧಿ ಪಡಿಸಿದರೂ ನಿರೀಕ್ಷಿತ ಪ್ರಮಾಣದ ಲಾಭವಾಗಿಲ್ಲ. ಸಾಲ ಮರುಪಾವತಿ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ 2017ರಲ್ಲಿ 99 ವರ್ಷಗಳ ಕಾಲ ಚೀನಾದ ಚೀನಾ ಮರ್ಚಂಟ್ ಪೋರ್ಟ್ ಹೋಲ್ಡಿಂಗ್‌ಗೆ ಲೀಸ್‌ಗೆ ನೀಡಲಾಗಿದೆ.
ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡ, ಮಲೇಷ್ಯಾ ಸೇರಿದಂತೆ ಹಲವು ದೇಶಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಈ ಕಾರಣಕ್ಕೆ ಚೀನಾದ ಒನ್ ರೋಡ್, ಒನ್ ಬೆಲ್ಟ್ ಈಗ ಡೆಟ್ ಟ್ರ್ಯಾಪ್ ಡಿಪ್ಲೊಮಸಿ ಎಂದೇ ಎಂದೇ ಕುಖ್ಯಾತಿ ಪಡೆದಿದೆ.