ಮಡಿಕೇರಿ : ಭಾಗಮಂಡಲದಲ್ಲಿ ನಿರ್ಮಾಣವಾಗಿರುವ ಕೊಡಗಿನ ಏಕೈಕ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತಗೊಂಡಿದ್ದು ಇನ್ನು ಮುಂದೆ ಪ್ರವಾಹ ಬಂದರೂ ಗ್ರಾಮಸ್ಥರು, ಕಾವೇರಿ ಭಕ್ತರು ಯಾವುದಾದರೂ ಮಳೆಗಾಲದಲ್ಲಿ ಓಡಾಟ ನಡೆಸುತ್ತಿದ್ದಾರೆ.
ಹೌದು. ಸುಮಾರು ಆರು ವರ್ಷಗಳ ನಂತರ ಸೇತುವೆ ಕಾಮಗಾರಿ ಮುಕ್ತಾಯಗೊಳ್ಳುತ್ತಿದೆ, ಒಂದಷ್ಟು ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ವಾಹನಗಳ ಸಂಚಾರಕ್ಕೆ ಮೇಲ್ಸೇತುವೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮೇಲ್ಸೇತುವೆ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಮಳೆಗಾಲದಲ್ಲಿ ಭಾಗಮಂಡಲ ಜಲಾವೃತವಾಗುವುದು ಸಾಮಾನ್ಯ. ತ್ರಿವೇಣಿ ಸಂಗಮ ಮುಳುಗಡೆಯಾದರೆ ತಲಕಾವೇರಿ, ಕೊರಂಗಾಲ, ಅಯ್ಯಂಗೇರಿ, ನಾಪೋಕ್ಲು ಮತ್ತು ಚೇರಂಗಾಲ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತವೆ. ಇದರಿಂದ ಈ ಭಾಗದ ನಿವಾಸಿಗಳು ಮಳೆಗಾಲದಲ್ಲಿ ವಿಪರೀತ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಭಾಗದ ಮಕ್ಕಳಿಗೆ ಶಾಲೆಗೆ ತೆರಳಲು ಕೂಡ ಸಮಸ್ಯೆಯಾಗುತ್ತಿದೆ. 2020 ರ ಆಗಸ್ಟ್ ತಿಂಗಳಲ್ಲೂ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದಿತ್ತು. ಪರಿಣಾಮ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದರು ನಾರಾಯಣ ಆಚಾರ್ ಮತ್ತು ಕುಟುಂಬದ ಐವರು ಭೂ ಸಮಾಧಿಯಾಗಿದ್ದರು. ಆಗಲೂ ಕೂಡ ಬಾರಿ ಮಳೆ ಸುರಿಯುತ್ತಿದ್ದರಿಂದ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿತ್ತು. ಭಾಗಮಂಡಲದಿಂದ ತಲಕಾವೇರಿವರೆಗೆ ಹಲವು ಕಡೆಗಳಲ್ಲಿ ಭೂಕುಸಿತವಾಗಿ ಜೆಸಿಬಿ ಮತ್ತು ಇತರೇ ವಾಹನಗಳನ್ನು ತೆಗೆದುಕೊಂಡು ಹೋಗಿ ರಸ್ತೆ ತೆರೆಯಲು ಪರದಾಡಬೇಕಾಗಿತ್ತು. ಹೀಗಾಗಿ ಭಾಗಮಂಡಲದಲ್ಲಿದ್ದ ಪ್ರವಾಹದ ನೀರನ್ನು ದಾಟಿ ಮುಂದೆ ಹೋಗಲು ಎರಡು ದಿನ ಕಾಯಬೇಕಾಗಿತ್ತು.
ಹಲವಾರು ಅಂಶಗಳಿಂದ ಪ್ರತಿ ಮಳೆಗಾಲದಲ್ಲಿಯೂ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದ ಭಾಗಮಂಡಲ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರಿಗೆ ಮೇಲ್ಸೇತುವೆ ಕಾಮಗಾರಿಯನ್ನು ಮುಕ್ತಗೊಳಿಸಲಾಗಿದೆ.