ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ ನಾಲ್ಕೈದು ವರ್ಷವೇ ಆಗಿ ಹೋಗಿತ್ತು. ದೇಹಗಳು ಕೊಳೆತರು ಯಾರಿಗೂ ಗೊತ್ತಾಗಿರಲಿಲ್ಲ. ಡಿಸೆಂಬರ್ ತಿಂಗಳಲ್ಲಿ ಅಸ್ಥಿಪಂಜರದ ವಿಚಾರ ಬೆಳಕಿಗೆ ಬಂದಿತ್ತು. ಆತ್ಮಹತ್ಯೆಯೋ.. ಕೊಲೆಯೋ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಇದೀಗ ಎಫ್ಎಸ್ಎಲ್ ವರದಿ ಬಂದಿದೆ.
ನಿವೃತ್ತ ಎಇಇ ಜಗನಾಥ್ ರೆಡ್ಡಿ, ಪತ್ನಿ ಪ್ರೇಮ ಲೀಲಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣ, ನರೇಂದ್ರ ಅವರ ಅಸ್ಥಿಪಂಜರಗಳನ್ನು, ಸಾವಿನ ಕಾರಣ ತಿಳಿಯಲು FSL ಗೆ ಪೊಲೀಸರು ಕಳಿಸಿದ್ದರು. ಇದೀಗ ವರದಿ ಬಂದಿದ್ದು, ನಿದ್ದೆ ಮಾತ್ರೆಯ ಅಂಶ ಬಯಲಾಗಿದೆ. ಐವರ ಮೃತದೇಹಗಳಲ್ಲಿ ಬಹುತೇಕ ನಿದ್ದೆ ಮಾತ್ರೆಯ ಅಂಶ ಪತ್ತೆಯಾಗಿದ್ದು, FSL ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ತನಿಖೆಯನ್ನು ನಡೆಸುತ್ತಿದ್ದರು. ಇದೀಗ ಎಫ್ಎಸ್ಎಲ್ ವರದಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವಿಚಾರವಾಗಿ ಎಸ್ಪಿ ಮಾಹಿತಿ ನೀಡಿದ್ದು, ನಿದ್ರೆ ಮಾತ್ರೆ ಸೇವಿಸಿ, ಸಾವನ್ನಪ್ಪಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, 71 ಸಾಕ್ಷ್ಯಗಳನ್ನು ಸಂಗ್ರಹಣೆ ಮಾಡಿ ಲ್ಯಾಬ್ ಗೆ ಕಳಿಸಲಾಗಿತ್ತು. ಪ್ರಕರಣದ ಸಲಕ್ಕೆ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆಸ್ಪತ್ರೆ ಡಾಕ್ಟರ್ ವೇಣು ಶ್ರೀ ಕೃಷ್ಣ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಮೂಲೆಗಳಿಗೆ ಪೆಟ್ಟಾದ ಅಂಶ ಕಂಡು ಬಂದಿಲ್ಲ. ಐದು ಅಸ್ತಿ ಪಂಜರ ದಲ್ಲಿ ಡ್ರಗ್ ಅಂಶ ಸಿಕ್ಕಿದೆ. ನಿದ್ದೆ ಮಾತ್ರೆ ಸೇವಿಸಿ ಸಾವನ್ನಪ್ಪಿರಬಹುದು. ಮನೆಯ ಕಿಚನ್ ನಲ್ಲಿದ್ದ ಪಾತ್ರೆಗಳಲ್ಲಿ ಸೈನೈಡ್ ಅಂಶ ಸಿಕ್ಕಿದೆ. ಆದರೆ ಆಸ್ತಿ ಪಂಜರದಲ್ಲಿ ಸೈನೈಡ್ ಏನು ಸಿಕ್ಕಿಲ್ಲ, ಮನೆಯಲ್ಲಿ ಟ್ಯಾಬ್ಲೆಟ್ ಹಾಗೂ ಮೆಡಿಸಿನ್ ಸಹ ಸಿಕ್ಕಿತ್ತು.
ಐದು ಮಂದಿ 2019 ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಸಾವನ್ನಪ್ಪಿರುವ ಶಂಕೆ ಇದೆ. ಮರಣೋತ್ತರ ಪರೀಕ್ಷೆಯಲ್ಲಿ ಸಹ ಐದು ವರ್ಷಗಳು ಆಗಿರಬಹುದು ಎಂದು ಹೇಳಲಾಗಿದೆ. ನಮಗೆ ಸಿಕ್ಕ ಪತ್ರ ಯಾರ ಬರಹ ಎಂದು ತಿಳಿಯಲು ಸ್ಯಾಂಪಲ್ ಸಿಕ್ಕಿಲ್ಲ, ವಿಶ್ವಾಸ್ ಅಂತ ಪತ್ರದಲ್ಲಿ ಉಲ್ಲೇಖವಿದ್ದ ವ್ಯಕ್ತಿಯನ್ನು ವಿಚಾರಣೆ ಮಾಡಲಾಯಿತು. ಆದರೆ ಆ ವ್ಯಕ್ತಿಗೆ ಈ ಸಾವುಗಳಿಗೆ ಸಂಬಂಧ ಇಲ್ಲ ಎಂದು ತಿಳಿಯಿತು.ಇನ್ನೂ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ, ಹಾಗಾಗಿ ಈ ತನಿಖೆ ಮುಂದುವರೆಯುತ್ತದೆ. ಹೇಗೆ ಐವರು ಮೃತಪಟ್ಟಿದ್ದಾರೆ ಎಂಬುದು FSLನಲ್ಲಿ ಧೃಡ ಆಗಿದೆ ಎಂದು ಚಿತ್ರದುರ್ಗ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಮಾಹಿತಿ ನೀಡಿದರು.