ಬೆಂಗಳೂರು, ಮೇ 17: ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಶಿವಾಜಿನಗರ, ವಿಧಾನಸೌಧ ಪ್ರದೇಶ ಸೇರಿದಂತೆ ಬೆಂಗಳೂರು ನಗರದ ಬಹುತೇಕ ಕಡೆಗಳಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆಯೇ ಮಳೆಯಾಗಿದೆ. ರಾಮಕೃಷ್ಣ ಆಶ್ರಮ, ಜೆಸಿ ರಸ್ತೆ, ನ್ಯಾಷನಲ್ ಕಾಲೇಜು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದು ವಾಹನ ಸವಾರರ ಸಂಚಾರಕ್ಕೆ ತೊಡಕು ಉಂಟಾಯಿತು. ನ್ಯಾಷನಲ್ ಕಾಲೇಜು ಹಾಗೂ ಲಾಲ್ ಬಾಗ್ ಮಧ್ಯೆ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಯಿತು.
ಬೆಂಗಳೂರಿನ ಎಲ್ಲೆಲ್ಲಿ ಮಳೆ?
ಶಾಂತಿನಗರ, ಕೋರಮಂಗಲ, ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್, ಕೆಆರ್ ಮಾರ್ಕೆಟ್, ಮೆಜೆಸ್ಟಿಕ್, ಶಿವಾಜಿನಗರ, ವಿಧಾನಸೌಧ, ವಸಂತನಗರ, ಎಂಜಿ ರಸ್ತೆ, ಕಬ್ಬನ್ಪಾರ್ಕ್, ಟ್ಯಾನಿರೋಡ್, ರಾಮಕೃಷ್ಣ ಆಶ್ರಮ, ಬಸವನಗುಡಿ, ಗಿರಿನಗರ, ಶ್ರೀನಿವಾಸ ನಗರ, ಕತ್ರಿಗುಪ್ಪೆ, ಜಯನಗರ, ಬನಶಂಕರಿ ಸೇರಿದಂತೆ ಹಲವೆಡೆ ಮಳೆ ಸುರಿಯಿತು. ಬೆಳಗ್ಗೆ 5 ಗಂಟೆಯಿಂದಲೇ ಕೆಲವೆಡೆ ಸಾಧಾರಣ ಮಳೆಯಾದರೆ ಇನ್ನು ಕೆಲವೆಡೆ ಧಾರಾಕಾರವಾಗಿ ಮಳೆ ಸುರಿಯಿತು.
ಮೂರು ದಿನ ಭಾರಿ ಮಳೆ ಮುನ್ಸೂಚನೆ : ಮುಂದಿನ ಮೂರು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೇ 19ರ ನಂತರ 3 ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮೈಸೂರು ಮತ್ತು ಬೆಂಗಳೂರು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮೇ 31ಕ್ಕೆ ಕೇರಳ ಪ್ರವೇಶಿಸಲಿದೆ ಮುಂಗಾರು : ಮುಂಗಾರು ಮಳೆ ಮೇ 31ರಂದು ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಡಿಕೆಯಂತೆ ಜೂನ್ 1ರಂದು ಮುಂಗಾರು ಮಳೆ ಕೇರಳ ಪ್ರವೇಶಿಸುತ್ತದೆ. ಆದರೆ ಈ ಬಾರಿ 1 ದಿನ ಮುನ್ನವೇ ಮುಂಗಾರು ಮಾರುತ ಆಗಮನವಾಗಲಿದೆ. ಕರ್ನಾಟಕ ಕರಾವಳಿ ಭಾಗಕ್ಕೆ ಜೂನ್ 2 ಅಥವಾ 3ಕ್ಕೆ ಮುಂಗಾರು ಮಾರುತಗಳು ಆಗಮನವಾಗುವ ನಿರೀಕ್ಷೆಯಿದೆ.