ಐಪಿಎಲ್ 2024 ರಲ್ಲಿ ಶನಿವಾರ (ಮೇ 18 ರಂದು) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ದೊಡ್ಡ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಪ್ಲೇ ಆಫ್ ರೇಸ್‌ನಲ್ಲಿದ್ದು, ಈ ಪಂದ್ಯವನ್ನು ನಾಕೌಟ್ ಎಂದೇ ಪರಿಗಣಿಸಲಾಗುತ್ತಿದೆ. ಇದಲ್ಲದೆ, ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಪೈಪೋಟಿಯ ಜೊತೆಗೆ, ಭಾರತದ ಇಬ್ಬರು ದೊಡ್ಡ ಕ್ರಿಕೆಟ್ ತಾರೆಗಳಾದ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಕೂಡ ಮುಖಾಮುಖಿಯಾಗಲಿದ್ದಾರೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಪಂದ್ಯಕ್ಕೂ ಮುನ್ನ ಧೋನಿ ಬೆಂಗಳೂರಿನ ಡ್ರೆಸ್ಸಿಂಗ್ ರೂಮ್‌ನಲ್ಲಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರ್ಸಿಬಿ ವಿರುದ್ಧದ ಪಂದ್ಯಕ್ಕಾಗಿ ಧೋನಿ ಸೇರಿದಂತೆ ಇಡೀ ಸಿಎಸ್‌ಕೆ ತಂಡ ಬೆಂಗಳೂರಿಗೆ ಆಗಮಿಸಿದೆ. ಇದೀಗ ಆರ್ಸಿಬಿ ಧೋನಿ ಸ್ವಾಗತದ ವಿಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಮಾಜಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡ್ರೆಸ್ಸಿಂಗ್ ರೂಮ್ಗೆ ಬಂದು ಚಹಾ ಕೇಳುತ್ತಿರುವುದನ್ನು ಕಾಣಬಹುದು. ಧೋನಿಯ ಚಹಾದ ಮೇಲಿನ ಈ ಪ್ರೀತಿ ಮತ್ತು ಸರಳತೆಯನ್ನು ನೋಡಿ, ಡ್ರೆಸ್ಸಿಂಗ್ ರೂಮ್ನಲ್ಲಿದ್ದವರು ಮನಸೋತರು. ಆರ್‌ಸಿಬಿ ಸಿಬ್ಬಂದಿ ಅವರಿಗೆ ಒಂದು ಕಪ್ ಚಹಾ ನೀಡಿದರು.
ಮಹೇಂದ್ರ ಸಿಂಗ್ ಧೋನಿ ಚಹಾ ಪ್ರೇಮಿ ಎಂಬುದು ಅವರ ಅಭಿಮಾನಿಗಳಿಗೆ ತಿಳಿದಿರಬಹುದು. ಅವರು ಈ ಹಿಂದೆ ಹಲವು ಸಂದರ್ಶನಗಳಲ್ಲಿ ಚಹಾದ ಮೇಲಿನ ಪ್ರೀತಿಯನ್ನು ಪ್ರಸ್ತಾಪಿಸಿದ್ದಾರೆ. ಧೋನಿ ಅವರ ಈ ವಿಡಿಯೋ ನೋಡಿದ ನಂತರ ಕೊಹ್ಲಿ ಮತ್ತು ಧೋನಿ ಅಭಿಮಾನಿಗಳು ತುಂಬಾ ಖುಷಿಪಟ್ಟಿದ್ದಾರೆ. ಮತ್ತೊಮ್ಮೆ ಧೋನಿ ಮತ್ತು ವಿರಾಟ್ ಅವರನ್ನು ಮೈದಾನದಲ್ಲಿ ನೋಡಲು ಕಾಯುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಆರ್ಸಿಬಿ ತಂಡವು ಈ ಮಹತ್ವದ ಪಂದ್ಯವನ್ನು ಗೆದ್ದು ಪ್ಲೇ ಆಫ್‌ಗೆ ಪ್ರವೇಶಿಸಲು ಎದುರು ನೋಡುತ್ತಿದೆ. ಉತ್ತಮ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಮೇಲೆ ಎಲ್ಲರ ನಿರೀಕ್ಷೆಯಿದ್ದು, 661 ರನ್ ಗಳಿಸಿದ್ದಾರೆ.
ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕೂಡ ಇದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಆಗುತ್ತಿದೆ. ಪಂದ್ಯದ ದಿನ ಕೂಡ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಸಂಜೆ, ತಾಪಮಾನವು ಸುಮಾರು 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಶೇ. 100 ರಷ್ಟು ಮೋಡ ಆವರಿಸಲಿದೆ. ಮಳೆಯ ಸಂಭವನೀಯತೆಯು ಶೇಕಡಾ 47 ರಷ್ಟಿರಲಿದೆ. ರಾತ್ರಿ ವೇಳೆಯೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳು ಶೇಕಡಾ 60 ಕ್ಕಿಂತ ಹೆಚ್ಚಿದೆ. ಅಂದರೆ ಆರ್ಸಿಬಿ-ಸಿಎಸ್ಕೆ ನಡುವಣ ಪಂದ್ಯಕ್ಕೆ ಮಳೆ ಅಡಚಣೆಯನ್ನು ಉಂಟು ಮಾಡುವುದು ಬಹುತೇಕ ಖಚಿತ ಎನ್ನಬಹುದು.