ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ವಿಚಾರ ಮುಂದಿಟ್ಟುಕೊಂಡು ಮೆಟ್ರೋ ಆದಾಯದ ಬಗ್ಗೆ ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲ ಬಾರಿಗೆ ಪ್ರಧಾನಿಗಳು ಮೆಟ್ರೋ ಆದಾಯ, ಶಕ್ತಿ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಮೆಟ್ರೋ ಇದೆ, ಬೇರೆ ಕಡೆ ಇಲ್ಲ. ಪ್ರಧಾನಿ ಮೋದಿ ಇದನ್ನ ಗಮನಿಸಬೇಕು. ಆದ್ರೆ ಬಸ್ ಪ್ರಯಾಣ ಎಲ್ಲ ಕಡೆ ಮಾಡ್ತಿದ್ದಾರೆ. ಮಾಹಿತಿ ಇಲ್ಲದೇ ಪ್ರಧಾನಿಗಳು ಮಾತಾಡಿರಬಹುದು ಅಂದುಕೊಂಡಿದ್ದೇನೆ. ಅವರ ಕೈಯಲ್ಲಿ ಮಾಡಲು ಆಗಿಲ್ಲ ಅಂತ, ನಾವು 5 ಗ್ಯಾರಂಟಿಗಳನ್ನ ಜಾರಿ ಮಾಡಿದ್ದೇವೆ ಎಂದು ಪ್ರಧಾನಿಗೆ ಕುಟುಕಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಮೊದಲನೇ ಗ್ಯಾರಂಟಿಯಾಗಿ ಶಕ್ತಿ ಯೋಜನೆ ಜಾರಿಯಾಗಿದೆ. ಸಾವಿರಕ್ಕೂ ಹೆಚ್ಚು ಬಸ್ ಖರೀದಿ ಮಾಡಿ ಎಲ್ಲರಿಗೂ ಅನುಕೂಲ ಆಗಲಿ ಎಂದು ಉದ್ಘಾಟನೆ ಮಾಡಿದ್ದೇವೆ. ಎಲ್ಲ ವರ್ಗದ ಜನ ಇದರ ಉಪಯೋಗ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯಿಂದ ಎಲ್ಲರಿಗೂ ಅನುಕೂಲ ಆಗ್ತಿದೆ. ಮೆಟ್ರೋ ಎಲ್ಲ ನಗರಗಳಲ್ಲಿ ಇಲ್ಲ. ಆದರೆ ಬೆಂಗಳೂರು ಮೆಟ್ರೋ ಹೆಚ್ಚು ಪ್ರಯಾಣ ಆಗಿದೆ. ಆದಾಯ ಕೂಡ ಇದೆ ಅಂತ ಹೇಳಿದ್ದಾರೆ.
ಶಕ್ತಿ ಯೋಜನೆ ಆರಂಭಕ್ಕೂ ಮುನ್ನ ಕಳೆದ ವರ್ಷ ಜೂನ್ ತಿಂಗಳಿನಲ್ಲಿ 1.81 ಕೋಟಿ ಪ್ರಯಾಣಿಕರು ಪ್ರಯಾಣ ಮಾಡಿದ್ರೆ ಆದಾಯ 141 ಕೋಟಿ ರೂ. ಇತ್ತು. ಈ ವರ್ಷ ಏಪ್ರಿಲ್ ನಿಂದ 2.09 ಕೋಟಿ ಜನ ಬಸ್‌ನಲ್ಲಿ ಪ್ರಯಾಣಿಸಿದ್ದು, 151 ಕೋಟಿ ರೂ. ಆದಾಯ ಬಂದಿದೆ. ಮೆಟ್ರೋದಿಂದ ಈ ವರ್ಷ 135 ಕೋಟಿ ರೂ. ಆದಾಯ ಬಂದಿದೆ. ಪ್ರಧಾನಿಗಳು ತಪ್ಪು ಮಾಹಿತಿ ನೀಡಿದ್ದಾರೆ ಅಂತ ಟಾಂಗ್ ಕೊಟ್ಟಿದ್ದಾರೆ.