ಚಿತ್ರದುರ್ಗ : ರಾಷ್ಟ್ರೀಯ ಡೆಂಗೀ ದಿನದ ಅಂಗವಾಗಿ ಜನ ಜಾಗೃತಿ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಬುಧವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಗರದ ಐತಿಹಾಸಿಕ ಕೋಟೆ ಮುಂಭಾಗದ ಸೆಂಟ್ ಮೇರಿಸ್ ನರ್ಸಿಂಗ್ ಕಾಲೇಜು ಮುಂಭಾಗದಲ್ಲಿ ಡೆಂಗೀ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.
ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚು ಕಂಡು ಬಂದಿದ್ದು, ಸಾರ್ವಜನಿಕರು ಜಾಗೃತಿವಹಿಸಬೇಕು. ನಾಗರೀಕರ ಜಾಗೃತಿಗಾಗಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲಾಖೆಯ ಮಾರ್ಗದರ್ಶನ ಚಾಚು ತಪ್ಪದೇ ಪಾಲಿಸಿ ಡೆಂಗ್ಯೂ ಜ್ವರ ನಿಯಂತ್ರಿಸಿರಿ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ಸಾರ್ವಜನಿಕರೇ ಎಚ್ಚರಗೊಳ್ಳಿ. ಬುದ್ದಿವಂತರಾಗಿ ಸೊಳ್ಳೆಗಳ ಕಡಿತದಿಂದ ಸ್ವಯಂ ರಕ್ಷಣೆ ಪಡೆಯಿರಿ. ಮನೆಯ ಸುತ್ತು-ಮುತ್ತ ನೀರು ನಿಲ್ಲದಂತೆ ಸ್ವಚ್ಚತೆ ಕಾಪಾಡಿ ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕಾಶಿ ಮಾತನಾಡಿ, ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಡೆಂಗ್ಯೂ ಪ್ರಕರಣಗಳು ಒಟ್ಟು ಜಿಲ್ಲೆಯಲ್ಲಿ 187 ಪ್ರಕರಣಗಳು ಅದರಲ್ಲೂ ನಗರ ಪ್ರದೇಶಗಳಲ್ಲಿ 133 ಪ್ರಕರಣಗಳು ಕಂಡುಬಂದಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ನಿಮ್ಮ ಮನೆಯ ನೀರು ಸಂಗ್ರಹಣೆ ಬಗ್ಗೆ ಹಚ್ಚಿನ ಗಮನಹರಿಸಿ ವಾರಕ್ಕೊಮ್ಮೆಯಾದರೂ ನೀರು ಸಂಗ್ರಹಿಸಿದ ತೊಟ್ಟಿ ಸ್ವಚ್ಚವಾಗಿ ತೊಳೆದು ಒಣಗಸಿ ನೀರು ಸಂಗ್ರಹಿಸಿ ಸೊಳ್ಳೆಗಳಿಂದ ಸ್ವಯಂ ರಕ್ಷಣೆ ಪಡೆಯಿರಿ ಎಂದು ತಿಳಿಸಿದ ಅವರು, ರಾಷ್ಟ್ರೀಯ ಡೆಂಗೀ ದಿನದ ಈ ವರ್ಷದ ಘೋಷವಾಕ್ಯ “ಸಮುದಾಯದೊಂದಿಗೆ ಸೇರಿ ಡೆಂಗಿ ಜ್ವರವನ್ನು ನಿಯಂತ್ರಿಸೋಣ” ಎಲ್ಲ ಹಂತಗಳಲ್ಲಿಯೂ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಡೆಂಗೀ ಜನ ಜಾಗೃತಿ ಜಾಥಾವು ಚಿತ್ರದುರ್ಗ ನಗರದ ಕೋಟೆ ಮುಂಭಾಗದ ಸೆಂಟ್ ಮೇರಿಸ್ ನರ್ಸಿಂಗ್ ಕಾಲೇಜ್‍ನಿಂದ ಆರಂಭವಾಗಿ, ಏಕನಾಥೇಶ್ವರಿ ಪಾದಗುಡಿ ವೃತ್ತದಲ್ಲಿ ಮಾನವ ಸರಪಳಿ ಮಾಡಿ, ಕಾಮನಬಾವಿ ಬಡಾವಣೆ, ಕರುವಿನಕಟ್ಟೆ ವೃತ್ತದಿಂದ ಪೋಸ್ಟ್ ಆಫೀಸ್ ಮಾರ್ಗವಾಗಿ ಮಹಾರಾಣಿ ಕಾಲೇಜ್‍ನಿಂದ ಸೆಂಟ್ ಮೇರಿಸ್ ನಸಿರ್ಂಗ್ ಕಾಲೇಜ್‍ಗೆ ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಾಂಬ್ಳಿಮಠ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಬಿ.ಜಾನಕಿ, ಮುಖ್ಯ ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಮ್.ಬಿ.ಹನುಮಂತಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸುರೇಶ್ ಬಾಬು, ಮಲ್ಲಿಕಾರ್ಜುನ, ನಾಗರಾಜ್, ಪುನೀತ್, ಶ್ರೀನಿವಾಸ, ಗುರುಮೂರ್ತಿ, ಗಂಗಾಧರ್ ರೆಡ್ಡಿ, ರಂಗಾರೆಡ್ಡಿ, ಪ್ರಸನ್ನಕುಮಾರ್, ಸಿರೀಶ್, ರುದ್ರಮುನಿ, ಕಾಲೇಜಿನ ಪ್ರಾಂಶುಪಾಲರಾದ ಪುನೀತ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ನಸಿರ್ಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.