ಬೆಳಗಾವಿ : ನಗರದ ಅಳ್ವಾನ್ ಗಲ್ಲಿಯಲ್ಲಿ ಕ್ರಿಕೆಟ್ ಜಗಳ ವಿಕೋಪಕ್ಕೆ ಹೋಗಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಿಂದ ಬಿಗುವಿನ ವಾತಾವರಣನಿರ್ಮಾಣವಾಗಿದೆ.
ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಚಿಕ್ಕ ಮಕ್ಕಳ ನಡುವೆ ಕ್ರಿಕೆಟ್ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಬಳಿಕ ಗಲಾಟೆಯಲ್ಲಿ ಮಧ್ಯಪ್ರವೇಶಿಸಿದ 2 ಗುಂಪಿನ ಯುವಕರು, ಮನೆಗಳ ಮೇಲೆ ಕಲ್ಲು ತೂರಿ ತಲ್ವಾರ್ ಪ್ರದರ್ಶನ ಮಾಡಿದ್ದಾರೆ. ಯುವಕರ ನಡುವಿನ ಗಲಾಟೆಯಲ್ಲಿ 8 ಮಂದಿಗೆ ಗಾಯಗಳಾಗಿವೆ. ಎರಡೂ ಕಡೆಯವರಿಗೆ ಗಾಯಗಳಾಗಿದ್ದು, ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಲಾಟೆಯಲ್ಲಿ ಓರ್ವ ಪೊಲೀಸ್ ಪೇದೆ ಅಮರ್‌ಗೂ ಗಾಯವಾಗಿದೆ. ಸದ್ಯ ಸ್ಥಳದಲ್ಲಿ ಕೆಎಸ್‍ರ್‍ಪಿ, ಮೂರು ಜನ ಸಿಪಿಐ ನಿಯೋಜನೆ ಮಾಡಲಾಗಿದೆ. ಇನ್ನು ಘರ್ಷಣೆ ವಿಚಾರದ ಕುರಿತಂತೆ ಶಹಾಪುರ ಪೊಲೀಸ್ ಠಾಣೆಗೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಮಾರ್ಟಿನ್, ಘಟನೆ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಬೆಳಗಾವಿ ನಗರದಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ಜೊತೆಗೆ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಕಮಿಷನರ್ ಸೂಚನೆ ನೀಡಿದರು.
ನಗರದ ತುಂಬೆಲ್ಲಾ ರೌಂಡ್ಸ್, ಸೂಕ್ಷ್ಮ ಪ್ರದೇಶದಲ್ಲಿ ನಿಗಾ ವಹಿಸುವಂತೆಯೂ ಸೂಚನೆ ಕೊಟ್ಟಿದ್ದಾರೆ. ಬೆಳಗಾವಿ ನಗರ ಸೇರಿದಂತೆ ಹೊರ ಜಿಲ್ಲೆಯಿಂದ ಹೆಚ್ಚುವರಿ ಸಿಬ್ಬಂದಿ ಕರೆಯಿಸುತ್ತಿದ್ದೇವೆ. ಗಲಾಟೆಯಲ್ಲಿ ಎಂಟು ಜನರಿಗೆ ಗಾಯವಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಕ್ರಿಕೆಟ್ ವಿಚಾರಕ್ಕೆ ಗಲಾಟೆಯಾಗಿದ್ದು ಬಳಿಕ ದೊಡ್ಡದಾಗಿದೆ. ತಲ್ವಾರ್ ಝಳಪಿಸಿದರ ಕುರಿತು ಮಾಹಿತಿ ಇದೆ. ಸ್ಥಳದಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಯಾರು ಸುಳ್ಳು ವದಂತಿ ಹರಡಿಸಬಾರದು, ಅಂತವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸ್ ಆಯುಕ್ತ ನೀಡಿದ್ದಾರೆ.