ಕಾರವಾರ, (ಮೇ 24): ಟಿಪ್ಪರ್ ಲಾರಿ ಚಾಲಕರೊಬ್ಬರಿಗೆ ಹೆಲ್ಮೆಟ್ ಧರಿಸಿಲ್ಲವೆಂದು ಹೊನ್ನಾವರ ಸಂಚಾರ ಠಾಣೆ ಪೊಲೀಸರು ವಿಥೌಟ್ ಹೆಲ್ಮೆಟ್ ದಂಡ ಹಾಕಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಚಂದ್ರಕಾಂತ್ ಹಳ್ಳೇರ ಎನ್ನುವರು ಮರಳು ತುಂಬಿದ ಟಿಪ್ಪರ್ ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಹೊನ್ನಾವರ ಸಂಚಾರಿ ಪೊಲೀಸರು, ಅಳ್ಳಂಕಿ ಎಂಬಲ್ಲಿ ತಡೆದು 500 ರೂಪಾಯಿ ದಂಡ ಹಾಕಿ ರಶೀದಿ ನೀಡಿದ್ದಾರೆ.
ಬಳಿಕ ಚಾಲಕ ರಶೀದಿಯನ್ನು ನೋಡಿ ಒಂದು ಕ್ಷಣ ಶಾಕ್ ಆಗಿದ್ದಾರೆ. ಯಾಕಂದ್ರೆ ರಶೀದಿಯಲ್ಲಿ ಹಾಕಿರುವ ದಂಡ ವಿಥೌಟ್ ಹೆಲ್ಮೆಟ್ಗೆ. ಈ ಬಗ್ಗೆ ಚಾಲಕ ಚಂದ್ರಕಾಂತ್, ಸರ್ ನಾನು ಬೈಕ್ ಓಡಿಸುತ್ತಿಲ್ಲ. ಟಿಪ್ಪರ್ ಚಾಲನೆ ಮಾಡುತ್ತೇನೆ ಎಂದು ಪೊಲೀಸರನ್ನ ಪ್ರಶ್ನಿಸಿದ್ದಾರೆ. ಹೇ ಅದೆಲ್ಲಾ ಇರುತ್ತೆ ಎಂದು ಹೇಳಿ ರಶೀದಿ ಕೊಟ್ಟು ಕಳುಹಿಸಿದ್ದಾರೆ.
ಮಾವಿನ ಖುರ್ವದ ವಿನುತಾ ವಿನೋದ್ ನಾಯ್ಕ ಎಂಬುವವರಿಗೆ ಸೇರಿದ ಟಿಪ್ಪರ್ ಲಾರಿಗೆ ಚಂದ್ರಕಾಂತ್ ಹಳ್ಳೇರ ಚಾಲಕರಾಗಿದ್ದು, ಇಂದು ಮರಳು ತುಂಬಿದ ಲಾರಿಯನ್ನು ಚಾಲನೆ ಮಾಡಿಕೊಂಡು ಹೋಗುವಾಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅಳ್ಳಂಕಿ ಎಂಬಲ್ಲಿ ಪೊಲೀಸರು ಅಡ್ಡಹಾಕಿದ್ದಾರೆ. ಈ ವೇಳೆ ಸಮವಸ್ತ್ರ ಧರಿಸದಕ್ಕೆ ದಂಡ ಹಾಕುವ ಬದಲು ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆ. ಇದೀಗ ದಂಡದ ರಶೀದಿ ಎಲ್ಲೆಡೆ ವೈರಲ್ ಆಗಿದೆ.
ಲಾರಿ ಡ್ರೈವರ್ಗೆ ವಿಥೌಟ್ ಹೆಲ್ಮೆಟ್ ದಂಡ ಹಾಕಿರುವ ರಶೀದಿ ವೈರಲ್ ಆಗಿದ್ದು ಇದಕ್ಕೆ ನೆಟ್ಟಿಗರು ನಾನಾ ರೀತಿಯಾಗಿ ಟ್ರೋಲ್ ಮಾಡುತ್ತಿದ್ದಾರೆ. ಹೊನ್ನಾವರ ಸಂಚಾರಿ ಪೊಲೀಸರು ಹೊಸದಾಗಿ ಟಿಪ್ಪರ್ ಚಾಲಕರಿಗೆ ಹೆಲ್ಮೆಟ್ ಕಡ್ಡಾಯ ಮಾಡಲು ಹೊರಟಿರುವಂತೆ ಕಾಣುತ್ತಿದೆ. ಪೊಲೀಸರೇ ನೀಡಿರುವ ರಶೀದಿ ಪ್ರಕಾರ ಇನ್ಮುಂದೆ ಹೊನ್ನಾವರದಲ್ಲಿ ಟಿಪ್ಪರ್ ಓಡಿಸುವ ಚಾಲಕರು ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸದೇ ಇದ್ದರೆ ದಂಡ ಬೀಳುವುದಂತೂ ಗ್ಯಾರಂಟಿ ಆಗುವಂತಿದೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.