ಚಿತ್ರದುರ್ಗ, ಮೇ. 25 : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಲಾರಿ ಮತ್ತು ಕಾರುಗಳ ನಡುವೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಚಿತ್ರದುರ್ಗ ಮೂಲದ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟು, ಆರು ಜನರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿದ್ದವು. ಗಂಭೀರವಾಗಿ ಗಾಯಗೊಂಡ ಮೂವರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿತ್ತು.
ಈ ಆಕಸ್ಮಿಕ ದುರ್ಘಟನೆಯಲ್ಲಿ ಮೃತರಾದ ಕುಟುಂಬದರಿಗೆ ತಲಾ ಎರಡು ಲಕ್ಷ ರೂಪಾಯಿಗಳ ಪರಿಹಾರವನ್ನು ಮಾನ್ಯ ಮುಖ್ಯಮಂತ್ರಿಗಳ ಪರಿಹಾರನಿಧಿಯಿಂದ ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಘೋಷಿಸಿದ್ದಾರೆ.
ಹಂಪಯ್ಯ (62), ಪ್ರೇಮಾ (58), ಮಂಜಯ್ಯ (60),ಪ್ರಭಾಕರ್ (40) ಈ ನಾಲ್ವರು ಮೃತ ದುರ್ದೈವಿಗಳಾಗಿದ್ದು ಚಿತ್ರದುರ್ಗ ಹೊಳಲ್ಕೆರೆ ತಾಲೂಕಿನ ಚನ್ನಪಟ್ಟಣ ಗ್ರಾಮದವರೆಂದು ಗುರುತಿಸಲಾಗಿದೆ. ಮೃತರು ಧರ್ಮಸ್ಥಳ ಮಂಜುನಾಥೇಶ್ವರ ದರ್ಶನ ಪಡೆದು ವಾಪಸ್ ಬರುವಾಗ ಈ ಘಟನೆ ಸಂಭವಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಚಿತ್ರದುರ್ಗದ ಜಿಲ್ಲಾಧಿಕಾರಿಗಳು ಚಿಕ್ಕಮಗಳೂರಿನ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ, ವೈದ್ಯಕೀಯ ತಪಾಸಣೆಗಳ ನಂತರ ಮೃತರ ಕಳೇಬರಹವನ್ನು ಮೃತ ಕುಟುಂಬದವರಿಗೆ ತಲುಪಿಸಿ ಅಂತ್ಯಕ್ರಿಯೆ ಮಾಡಿಸುವಲ್ಲಿ ಸಹಕರಿಸಿದ್ದರು.