Breaking
Sat. Dec 28th, 2024
ಬೆಂಗಳೂರು : ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ನಟನೆಯ, ಎ.ಪಿ. ಅರ್ಜುನ್ ನಿರ್ದೇಶನದ ‘ಮಾರ್ಟಿನ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ದೀಪಾವಳಿ ಸಮಯದಲ್ಲಿ ಅಂದರೆ ಈ ವರ್ಷ ಅಕ್ಟೋಬ‌ರ್ 11ಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಚಿತ್ರತಂಡ ಈ ವಿಷಯ ಘೋಷಣೆ ಮಾಡಿತು. ಈ ಚಿತ್ರಕ್ಕೆ ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ವಾಸವಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ. ಮೆಹ್ರಾ ಈ ಚಿತ್ರ ನಿರ್ಮಿಸಿದ್ದಾರೆ. ‘ಮಾರ್ಟಿನ್’ ಚಿತ್ರಕ್ಕೆ ಲೂಪ್ ಸ್ಟುಡಿಯೊದಲ್ಲಿ ಮಾತಿನ ಜೋಡಣೆ ಇತ್ತೀಚೆಗೆ ನಡೆದಿತ್ತು.
2021ರ ಸೆಪ್ಟೆಂಬರ್‌ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು. ಹೈದರಾಬಾದ್‌ನಲ್ಲಿ ಸೆಟ್ ಹಾಕಿ 45 ದಿನ ಶೂಟ್ ಮಾಡಿದ್ದ ಚಿತ್ರತಂಡ ವೈಜಾಗ್‌ನಲ್ಲಿ ಚೇಸ್ ಸೀನ್ ಹಾಗೂ ಕಾಶ್ಮೀರದಲ್ಲಿ 25 ದಿನದ ಚಿತ್ರೀಕರಣ ನಡೆಸಿತ್ತು. ಒಟ್ಟಾರೆ 240 ದಿನ ಚಿತ್ರದ ಚಿತ್ರೀಕರಣ ನಡೆದಿದೆ. ಚಿತ್ರದ ಆಡಿಯೊ ಹಕ್ಕನ್ನು ಅಧಿಕ ಮೊತ್ತ ನೀಡಿ ‘ಸರೆಗಮಪ’ ಪಡೆದುಕೊಂಡಿದೆ. ಮಣಿ ಶರ್ಮ ಅವರ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೂಡಿಬಂದಿದ್ದು, ರವಿ ಬಸೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಸತ್ಯ ಹೆಗಡೆ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಚಿತ್ರದ ತಾರಾಬಳಗದಲ್ಲಿ ಅನ್ವೇಶಿ ಜೈನ್, ಜಾರ್ಜಿಯ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕ ಅವಿನಾಶ್, ನಿಕ್ತಿನ್ ಧೀರ್, ನವಾಬ್ ಶಾ, ರೋಹಿತ್ ಪಾಠಕ್ ಮುಂತಾದವರಿದ್ದಾರೆ.

Related Post

Leave a Reply

Your email address will not be published. Required fields are marked *