ಮೂಡಿಗೆರೆ : ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಸಂಜೆ ವೇಳೆ ನಿರಂತರವಾಗಿ ಮಳೆಯಾಗುತ್ತಿದ್ದು,ಕುಡಿಯಲು ನೀರಿಲ್ಲದೆ ಸಂಕಟಪಡುತ್ತಿದ್ದ ಜನ ಜಾನುವಾರುಗಳು ನಿಟ್ಟುಸಿರು ಬಿಡುವಂತಾಗಿದೆ. ಗಾಳಿ, ಮಳೆಗೆ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ.
ಎರಡು ದಿನದ ಹಿಂದೆ ಮೂಡಿಗೆರೆ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಕಬ್ಬಿಣ ಸೇತುವೆ ಬಳಿ ರಾತ್ರಿ ವೇಳೆ ರಸ್ತೆಗೆ ಅಡ್ಡಲಾಗಿ ಮರಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ರಸ್ತೆ ಎರಡು ಬದಿಯಲ್ಲಿ ವಾಹನಗಳು ಬೆಳಗ್ಗೆ ವರೆಗೆ ಸಾಲುಗಟ್ಟಿ ನಿಂತಿದ್ದವು. ಬೆಳಗ್ಗೆ ಸ್ಥಳೀಯರು ಮರ ಕತ್ತರಿಸಿ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪಟ್ಟಣದ ಕುರುಕಮಕ್ಕಿ ಬಡಾವಣೆಯಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದೆ. ಪಿ.ಬಿ.ರಸ್ತೆ, ತತ್ಕಳ ರಸ್ತೆ, ಚಿಕ್ಕಳ್ಳ ಗ್ರಾಮದ ರಸ್ತೆಗಳಲ್ಲಿ ಮರಗಳು ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಉದುಸೆ ಗ್ರಾಮದ ಹೊತ್ತಿಕೆರೆ ಎಂಬಲ್ಲಿ ಬಸವರಾಜ್ ಎಂಬುವವರ ಮನೆಗೆ ಮರ ಬಿದ್ದು ಛಾವಣಿಗೆ ಹಾನಿಯಾಗಿದೆ. ಚಕ್ಕುಡಿಗೆ ಗ್ರಾಮದ ಜಗನ್ನಾಥ್ ಎಂಬುವರ ಜಾನುವಾರು ಕೊಟ್ಟಿಗೆ ಸಂಪೂರ್ಣ ಕುಸಿದಿದೆ.
ಗೋಣಿಬೀಡು ಗ್ರಾಪಂ ಎದುರಿನ ಹೈಮಾಸ್ಟ್ ಬೀದಿ ದೀಪದ ಕಂಬಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಭಾರಿ ಬಿಸಿಲಿನಿಂದ ಕಂಗೆಟ್ಟಿದ್ದವರಿಗೆ ಆರಂಭಿಕ ಮಳೆ ತಂಪು ನೀಡಿದೆ. ಕಾಫಿ ಕೊಯ್ಲಿನ ನಂತರ ಮುಂದಿನ ವರ್ಷದ ಫಸಲಿಗೆ ಗಿಡದಲ್ಲಿ ಹೂವು ಅರಳಲು ಒಮ್ಮೆ ನೀರು ನೀಡಬೇಕು. ಹೂವು ಅರಳಿದ 15 ದಿನದಲ್ಲಿ ಕಾಯಿ ಕಟ್ಟುವಿಕೆಗೆ ಮತ್ತೊಮ್ಮೆ ನೀರು ನೀಡಬೇಕು. ಮಳೆಯಾಗಿರುವುದರಿಂದ ಕಾಫಿ ಬೆಳಗಾರರು ನಿಟ್ಟಿಸಿರು ಬಿಟ್ಟಿದ್ದಾರೆ. ನೀರಿಲ್ಲದೆ ಬತ್ತಿ ಹೋಗಿದ್ದ ನದಿಗಳಾದ ಹೇಮಾವತಿ, ಜಪಾವತಿ, ಸುಣ್ಣದಹಳ್ಳ, ಸುಂಡೆಕೆರೆ ಹಳ್ಳದಲ್ಲಿ ನೀರಿನ ಹರಿವು ಆರಂಭವಾಗಿದೆ.