ಚಿತ್ರದುರ್ಗ ಮೇ. 25 : ನಗರದ ಗ್ರಾಮ ದೇವತೆಗಳಲ್ಲಿ ಒಂದಾದ ಶ್ರೀ ಉಚ್ಚಂಗಿ ಯಲ್ಲಮ್ಮ ಅಮ್ಮನವರ ಸಿಡಿ ಉತ್ಸವವೂ ಇಂದು ಸಡಗರ ಶ್ರದ್ದಾ ಭಕ್ತಿಯಿಂದ ನೆರವೇರಿತು. ದೊಡ್ಡಪೇಟೆಯಲ್ಲಿ ನೆಲೆಸಿರುವ ಅಮ್ಮನಿಗೆ ಕಳೆದ ಒಂದು ವಾರದಿಂದ ವಿವಿದ ರೀತಿಯ ಪೂಜೆಗಳನ್ನು ನೇರವೇರಿಸಿ ತದ ನಂತರ ನಿನ್ನೆ ನಗರದ ವಿವಿಧ ಬೀದಿಗಳಲ್ಲಿ ಮೆರವಣಿಗೆಯನ್ನು ನೇರವೇರಿಸಿ ಭಕ್ತಾಧಿಗಳಿಂದ ಪೂಜೆಯನ್ನು ಸ್ವೀಕಾರ ಮಾಡಿ, ಇಂದು ಹರಕೆಯನ್ನು ಹೊತ್ತ ಭಕ್ತಾಧಿಗಳು ತಾಯಿಯ ಸನ್ನಿಧಿಯಲ್ಲಿ ಸಿಡಿಯನ್ನು ಆಡುವುದರ ಮೂಲಕ ತಾಯಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಮೇ. 14ರಂದು ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಸಾರನ್ನು ಹಾಕಿ ಮೇ. 18ರಂದು ಅಮ್ಮನವರಿಗೆ ಕಂಕಣಧಾರಣೆ, ಮದಲಿಂಗಿತ್ತಿಯ ಪೂಜೆಯನ್ನು ಮಾಡಲಾಯಿತು. ರಾತ್ರಿ ಅಮ್ಮನವರಿಗೆ ಸಿಂಹ ಉತ್ಸವವನ್ನು ನೇರವೇರಿಸಲಾಯಿತು. ಮೇ. 19ರಂದು ಸರ್ಪೋತ್ಸವ ಮೇ.20 ರಂದು ನವಿಲು ಉತ್ಸವ, ಮೇ. 21ರಂದು ದೇವಿಗೆ ಅಭೀಷೇಕ ಹಾಗೂ ಮಹಾ ಮಂಗಳಾರತಿಯನ್ನು ನಡೆಸಲಾಯಿತು.
ಮೇ. 22ರಂದು ದೇವಿಯು ಕೆಳಗಿಳಿದು ರಾಜಬೀದಿಯಲ್ಲಿ ಕುದುರೆ ಉತ್ಸವ ಮತ್ತು ಅನ್ನ ಸಂತರ್ಪಣೆಯನ್ನು ನಡೆಸಲಾಯಿತು. ಮೇ. 23ರಂದು ದೇವಿಗೆ ಅಭೀಷೇಕ ಮಹಾ ಮಂಗಳಾರತಿ ನಡೆದಿದ್ದು, ಮೇ. 24 ರಂದು ದೇವಿಗೆ ಅಭೀಷೇಕ ಮತ್ತು ಮಹಾ ಮಂಗಳಾರತಿಯ ನಂತರ ರಥೋತ್ಸವವನ್ನು ನಗರದಲ್ಲಿ ನಡೆಸಲಾಯಿತು. ಮೇ. 23 ರ ಬೆಳಿಗ್ಗೆ 8 ಕ್ಕೆ ದೇವಿಗೆ ಅಭೀಷೇಕ ರಾತ್ರಿ 9ಕ್ಕೆ ಜೋಗಪ್ಪ ಮತ್ತು ಜೋಗಮ್ಮನವರಿಂದ ಓಕುಳಿ ಕಾರ್ಯಕ್ರಮ ನಡೆಯಲಿದ್ದು ಮೇ. 28 ರಂದು ಬೆಳಿಗ್ಗೆ 8 ಕ್ಕೆ ದೇವಿಗೆ ಅಭೀಷೇಕ ಕಂಕಣ ವಿಸರ್ಜನೆಯೊಂದಿಗೆ ಈ ವರ್ಷದ ಜಾತ್ರಾ ಕಾರ್ಯಕ್ರಮ ಮುಕ್ತಾಯವಾಗಲಿದೆ.
ತಾಯಿಯಲ್ಲಿ ವಿವಿಧ ರೀತಿಯ ಬೇಡಿಕೆಯನ್ನು ಇರಿಸಿದ ಭಕ್ತ ಸಮೂಹ ಅದನ್ನು ಈಡೇರಿಸುವಂತೆ ತಾಯಿಯಲ್ಲಿ ಮನವಿ ಮಾಡಿದ್ದು ಅದು ಈಡೇರಿದ್ದರಿಂದ ಇಂದು ತಾಯಿಗೆ ನೀಡಿದ ಮಾತಿನಂತೆ ಒಂದು ವಾರಗಳ ಕಾಲ ಉಪವಾಸ ಇದ್ದು ಇಂದು ಮೈಗೆಲ್ಲ ಹರಿಷಿಣವನ್ನು ಲೇಪಿಸಿಕೊಂಡು ತೆಲೆಗೆ ಧಿರಿಸನ್ನು ಧರಿಸಿ, ಕೈಯಲ್ಲಿ ಖಡ್ಗವನ್ನು ಹಿಡಿದು ಅದಕ್ಕೆ ತುದಿಯಲ್ಲಿ ನಿಂಬೆಹಣ್ಣನ್ನು ಸಿಕಿಸಿ ತಾಯಿಗೆ ಪ್ರಿಯವಾದ ಉರಿಮೆಯ ನಾದದೊಂದಿಗೆ ತಾಯಿಯ ಸನ್ನಿಧಾನಕ್ಕೆ ಆಗಮಿಸಿ ಪೂಜೆಯನ್ನು ಸಲ್ಲಿಸಿ ಅಲ್ಲಿ ಸಮಿತಿಯವರು ನಿರ್ಮಾಣ ಮಾಡಿದ ಕಂಬದಲ್ಲಿ ಕಟ್ಟಿ ಮೂರು ಸುತ್ತು ಸುತ್ತುವುದರೊಂದಿಗೆ ತಾಯಿಗೆ ತಮ್ಮ ಹರಕೆಯನ್ನು ಸಲ್ಲಿಸಿದರು.
ಕೋವಿಡ್ ಹಿನ್ನಲೆಯಲ್ಲಿ ಕಳೆದ 4 ವರ್ಷದಿಂದ ಸಿಡಿ ಆಡುವುದನ್ನು ಜಿಲ್ಲಾಡಳಿತ ನಿಷೇಧ ಮಾಡಿತ್ತು ಆದರೆ ಈ ಬಾರಿ ಎಲ್ಲವು ಸುಗಮವಾಗಿರುವುದರಿಂದ ಸಿಡಿಯನ್ನು ಆಡಲು ಜಿಲ್ಲಾಡಳಿತ ಸಮಿತಿಗೆ ಅನುಮತಿಯನ್ನು ನೀಡಿದ್ದರ ಹಿನ್ನಲೆಯಲ್ಲಿ ಸಮಿತಿಯವರು ಸಿಡಿಯನ್ನು ಆಡುವುದಕ್ಕೆ ತಯಾರಿಯನ್ನು ನಡೆಸಿ ತಾಯಿಯ ಹಾಗೂ ಭಕ್ತ ಆಸೆಯನ್ನು ಈಡೇರಿಸಿದ್ದಾರೆ. ಯಾವುದೇ ರೀತಿಯ ಅನಾಹುತವಾಗದಂತೆ ಎಚ್ಚರವನ್ನು ಸಮಿತಿ ವಹಿಸಿತ್ತು. ಪೋಲಿಸ್ ಭದ್ರತೆಯನ್ನು ಸಹಾ ಮಾಡಲಾಗಿತು.